ಗಂಗಾವತಿಯ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಓದಲು ಕನಕಗಿರಿಯ ಮುಸ್ಲಾಪೂರ ಗ್ರಾಮದ ಕಾವೇರಿ ವಾಲಿಕಾರ್ ಅಡ್ಮಿಷನ್ ಪಡೆದಿದ್ದರು. ಆ ಸಮಯದಲ್ಲಿ 10,000 ರೂ. ಪಾವತಿಸಿ, ಉಳಿದ 90,000 ರೂ. ಶೀಘ್ರದಲ್ಲೇ ನೀಡುವುದಾಗಿ ಅವರ ಪೋಷಕರು ಭರವಸೆ ನೀಡಿದ್ದರು. ಆದರೆ ಇತ್ತೀಚೆಗೆ ಗದಗ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕ ಹಿನ್ನೆಲೆಯಲ್ಲಿ, ಬಿಬಿಸಿ ಕಾಲೇಜಿನಿಂದ ಟಿಸಿ ಪಡೆಯಲು ಕಾವೇರಿ ಮನವಿ ಮಾಡಿಕೊಂಡಿದ್ದಾರೆ.
ಕಾವೇರಿಯ ಪೋಷಕರು ಟಿಸಿ ಕೇಳಿದಾಗ, ಕಾಲೇಜು ಚೇರ್ಮನ್ ಡಾ. ಚಿನಿವಾಲ ಅವರು ಉಳಿದ 90,000 ರೂ. ಪಾವತಿಸಿದರೆ ಮಾತ್ರ ಟಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಕುಟುಂಬದ ದುಸ್ಥಿತಿಯಿಂದ ಆ ಮೊತ್ತ ಪಾವತಿಸಲು ಸಾಧ್ಯವಿಲ್ಲವೆಂದು ಪೋಷಕರು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ “ಹಣ ಇಲ್ಲದಿದ್ದರೆ ಮೈಮೇಲಿನ ಬಂಗಾರ ಕೊಡಬೇಕು” ಎಂದು ಒತ್ತಾಯಿಸಿದ್ದಾರಂತೆ. ಈ ಒತ್ತಡಕ್ಕೆ ಮಣಿದ ಕಾವೇರಿಯ ತಾಯಿ ತಮ್ಮ ತಾಳಿಯನ್ನೇ ಬಿಚ್ಚಿ ನೀಡಿ ಟಿಸಿ ಪಡೆದಿದ್ದಾರೆ.
ಕಾವೇರಿಯ ತಾಯಿ ಘಟನೆ ಬಗ್ಗೆ ಮಾತನಾಡಿದ್ದು, “ಮಗಳ ಶುಲ್ಕಕ್ಕಾಗಿ ತಾಳಿ ಕೇಳಿದಾಗ, ಬೇರೆ ದಾರಿಯಿಲ್ಲದೇ ನನ್ನ ತಾಳಿಯನ್ನೇ ಕೊಟ್ಟೆ, ಕೊರಳಲ್ಲಿನ ತಾಳಿ ಕೇಳುವ.. ಎನ್ನುತ್ತಾ ದುಃಖ ಕಣ್ಣೀರು ಹಾಕಿದ್ದಾರೆ. ಈ ಘಟನೆಯಿಂದ ಕಾವೇರಿಯ ಕುಟುಂಬ ಮತ್ತು ಸ್ಥಳೀಯರು ಡಾ ಚಿನಿವಾಲ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಳಿಯಂತಹ ಪವಿತ್ರವಾದ ಆಭರಣವನ್ನು ಶುಲ್ಕಕ್ಕಾಗಿ ಒತ್ತೆಯಾಗಿ ಕೇಳುವ ಚೇರಮನ್‌ರ ನಡವಳಿಕೆ, ಮನಸ್ಥಿತಿ ಬಗ್ಗೆ ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಪರಿಣಾಮವಾಗಿ ಕಾಲೇಜು ನಿರ್ವಹಣೆಯ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ. ಶಿಕ್ಷಣ ಸಂಸ್ಥೆಯೊಂದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿ ವರ್ತಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಕಾನೂನು ಕ್ರಮಕ್ಕೆ ಒತ್ತಾಯ ವ್ಯಕ್ತಪಡಿಸಿದ್ದಾರೆ.






