ಖಾನಾಪುರದ ಬಿಜೆಪಿ ಶಾಸಕ ವಿಠ್ಠಲ ಹಲಗೆಕರ್ ಅವರ ಜೀವನ ಪಯಣ ರಾಜಕೀಯದ ಸಾಮಾನ್ಯ ಕಲ್ಪನೆಗಳಿಗೆ ಸಂಪೂರ್ಣ ಭಿನ್ನವಾಗಿದೆ. ಈ ಅಪರೂಪದ ಬದುಕಿನ ಕಥೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್‌ನ ಹಿರಿಯ ವರದಿಗಾರ ರವಿ ಶಿವರಾಮ್ ಅವರು ತಮ್ಮ ಸೋಷಿಯಲ್ ಮೀಡಿಯಾ ಲೇಖನದ ಮೂಲಕ ಬೆಳಕಿಗೆ ತಂದಿದ್ದಾರೆ.
ಇದನ್ನು ಓದಿ : ಬಾಗಲಕೋಟೆ: ಪೆನ್ನಿಗಾಗಿ ಜಗಳ 1ನೇ ತರಗತಿ ಬಾಲಕನ ಹೊಡೆತದಿಂದ ಕಣ್ಣು ಕಳೆದುಕೊಂಡಕ 5ನೇ ತರಗತಿ ವಿದ್ಯಾರ್ಥಿ!
ರಾಜಕೀಯ ಎಂದರೆ ವಿಲಾಸಿ ಕಾರುಗಳು, ಅಬ್ಬರದ ಪ್ರಚಾರ ಮತ್ತು ಅಧಿಕಾರದ ಪ್ರದರ್ಶನ ಎಂಬ ಚಿತ್ರಣ ನಮ್ಮ ಮುಂದೆ ಬರುತ್ತದೆ. ಆದರೆ ಇವೆಲ್ಲಕ್ಕೂ ಮೀರಿಯಾಗಿ, ‘ಸರಳತೆ’ ಎಂಬ ಪದಕ್ಕೆ ಹೊಸ ಅರ್ಥ ನೀಡಿರುವವರು ವಿಠ್ಠಲ ಹಲಗೆಕರ್. ಇವರ ಬದುಕು ಕೇವಲ ಸರಳವಲ್ಲ, ಅದು ಸಮಾಜಕ್ಕೆ ಪ್ರೇರಣೆಯಾಗಿದೆ.
ಗಣಿತದ ಮೇಷ್ಟ್ರಾಗಿದ್ದ ಹಲಗೆಕರ್ ಅವರು ಶಿಕ್ಷಕ ವೃತ್ತಿಯಲ್ಲಿ ಇರುವಾಗ ಸಂಜೆ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದರು. ಆಶ್ಚರ್ಯಕರ ಸಂಗತಿಯೆಂದರೆ, ತಿಂಗಳಿಗೆ ಕೇವಲ ಒಂದು ರೂಪಾಯಿ ಶುಲ್ಕ! ಆ ಒಂದೊಂದು ರೂಪಾಯಿಯನ್ನು ಸಂಗ್ರಹಿಸಿ ಸ್ವಸಹಾಯ ಸಂಘಕ್ಕೆ ಹೂಡಿಕೆ ಮಾಡಿ, ಇಂದು ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ‘ಮಹಾಲಕ್ಷ್ಮಿ ಸ್ವಸಹಾಯ ಸಂಘ’ವನ್ನು ಅವರು ಕಟ್ಟಿಬೆಳೆಸಿದ್ದಾರೆ. ಒಬ್ಬ ಮೇಷ್ಟ್ರು ಹಾಕಿದ ಲೆಕ್ಕಾಚಾರ ಇಂದು ಸಾವಿರಾರು ಕುಟುಂಬಗಳ ಜೀವನಕ್ಕೆ ಆಧಾರವಾಗಿದೆ.
ಶಾಸಕರ ಪತ್ನಿಯಾಗಿದ್ದರೂ, ರುಕ್ಮಿಣಿ ಅವರು ಇಂದಿಗೂ ತೋಪಿನಕಟ್ಟಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಲ್ಲ ಎಂಬ ವೈಯಕ್ತಿಕ ನೋವಿನ ನಡುವೆಯೂ, ಆ ಊರಿನ ಮಕ್ಕಳನ್ನೇ ತಮ್ಮ ಮಕ್ಕಳಂತೆ ಪ್ರೀತಿಸಿ ಪಾಠ ಹೇಳುವ ಅವರ ನಿಷ್ಠೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇವರ ಕುಟುಂಬವೂ ಅಧಿಕಾರದ ಹೊಳಪಿನಿಂದ ದೂರವೇ ಇದೆ. ಇಬ್ಬರು ಸಹೋದರರು ಇಂದಿಗೂ ಗಾರೆ ಕೆಲಸ ಮಾಡುತ್ತಿದ್ದು, ಸ್ವತಃ ಶಾಸಕ ವಿಠ್ಠಲ ಹಲಗೆಕರ್ ಅವರು ಅಧಿವೇಶನಕ್ಕೆ ತೆರಳುವ ಮುನ್ನ ಬೆಳಿಗ್ಗೆ ಹೊಲದಲ್ಲಿ ಕೆಲಸ ಮಾಡಿ ನಂತರವೇ ಸದನಕ್ಕೆ ಹೋಗುತ್ತಾರೆ. ಅಧಿಕಾರ ಬಂದರೂ ಮಣ್ಣಿನ ಗುಣ ಮರೆತಿಲ್ಲದ ನಿಜವಾದ ರೈತನ ಪ್ರತಿಬಿಂಬ ಇವರಲ್ಲಿ ಕಾಣಿಸುತ್ತದೆ.
ಖಾನಾಪುರದಲ್ಲಿ ಅವರು ನಡೆಸುತ್ತಿರುವ ಶಾಂತಿನಿಕೇತನ ಸಿಬಿಎಸ್‌ಇ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ರಾಜಕೀಯ ವಿರೋಧಿಗಳ ಭಾವಚಿತ್ರವಿರುವ ಬ್ಯಾಗ್‌ಗಳನ್ನು ಧರಿಸಿ ಬರುವ ಮಕ್ಕಳ ಬಗ್ಗೆ ಕೇಳಿದಾಗ, “ಮಕ್ಕಳಿಗೆ ರಾಜಕೀಯವೇನು ಗೊತ್ತು? ಅವರಿಗೆ ಬ್ಯಾಗ್ ಸಿಕ್ಕ ಖುಷಿ ಅಷ್ಟೇ” ಎಂದು ಹೇಳಿದ ಅವರ ಮಾತುಗಳು ಅವರ ವಿಶಾಲ ಮನೋಭಾವವನ್ನು ತೋರಿಸುತ್ತವೆ.
ಸಿದ್ಧಾಂತಗಳ ಗಡಿಗಳನ್ನು ಮೀರಿ ಮಾನವೀಯತೆಗೆ ಆದ್ಯತೆ ನೀಡುವ ಈ ಕುಟುಂಬ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅಪರೂಪದ ಉದಾಹರಣೆ. ಹಳೆಯ ಸಂಪ್ರದಾಯದಂತೆ ಕಾಣುವ ಹಲಗೆಕರ್ ಅವರು ವ್ಯವಹಾರದಲ್ಲಿ ಮಾತ್ರ ಸಂಪೂರ್ಣ ಆಧುನಿಕರು — ಜೇಬಿನಲ್ಲಿ ನಗದು ಇಲ್ಲ, ಆದರೆ ಗೂಗಲ್ ಪೇ ಸದಾ ಸಕ್ರಿಯ. ಭ್ರಷ್ಟಾಚಾರರಹಿತ, ಜನಸ್ನೇಹಿ ರಾಜಕಾರಣಕ್ಕೆ ವಿಠ್ಠಲ ಹಲಗೆಕರ್ ಅವರು ನಿಜವಾದ ಮಾದರಿಯಾಗಿದ್ದಾರೆ.






