ಪ್ರೇತಿಸಿದವರೆಲ್ಲರೂ ಜೀವನಪೂರ್ತಿ ಜೊತೆಗೇ ಇರುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇಂದಿನ ಆಧುನಿಕ ಯುಗದಲ್ಲೂ ಪ್ರೀತಿಸಿ ಮದುವೆಯಾಗುವುದು ಅಷ್ಟು ಸುಲಭದ ವಿಚಾರವಾಗಿಲ್ಲ. ಕಾಲ ಬದಲಾಗಿದ್ರೂ ಪ್ರೇಮಿಗಳಿಗೆ ಎದುರಾಗುವ ವಿರೋಧ ಮಾತ್ರ ಕಡಿಮೆಯಾಗಿಲ್ಲ.
ಇದನ್ನು ಓದಿ: ಚಿಕ್ಕಬಳ್ಳಾಪುರ: ಅಣ್ಣ–ತಂಗಿಯ ಪವಿತ್ರ ಸಂಬಂಧಕ್ಕೆ ಧಕ್ಕೆ: ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ 21 ವರ್ಷದ ಯುವತಿ ನೇಣಿಗೆ ಶರಣು
ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ಪೋಷಕರ ಒಪ್ಪಿಗೆ ಪಡೆದು ಸಂಭ್ರಮದಿಂದ ತಮ್ಮ ಪ್ರೀತಿಯನ್ನು ಮದುವೆಯಾಗುವ ಅವಕಾಶ ಸಿಗುತ್ತದೆ. ಇನ್ನೂ ಹಿಂದಿನ ಕಾಲಘಟ್ಟಗಳಲ್ಲಿ ಪ್ರೀತಿಯ ಕಥೆಗಳು ಹೆಚ್ಚಾಗಿ ಪೋಷಕರ ಹಾಗೂ ಸಮಾಜದ ವಿರೋಧಕ್ಕೆ ಸಿಲುಕಿ ಮುರಿದು ಹೋಗಿದ್ದವು. ಪ್ರೀತಿಯನ್ನು ಮನಸೊಳಗೆ ಒತ್ತಿ ಹಿಡಿದು, ಪೋಷಕರು ತೋರಿದವರನ್ನೇ ಮದುವೆಯಾಗಬೇಕಾದ ಪರಿಸ್ಥಿತಿಯಲ್ಲಿ ಅನೇಕರು ಜೀವನ ಸಾಗಿಸಿದ್ದರು.
ಹೀಗಿರುವಾಗ ಯೌವ್ವನದಲ್ಲಿ ಮುರಿದು ಹೋದ ಪ್ರೀತಿಗೆ ವೃದ್ಧಾಪ್ಯದಲ್ಲಿ ಮದುವೆಯ ರೂಪ ಸಿಕ್ಕರೆ ಅದು ಎಷ್ಟು ವಿಶೇಷವಾಗಿರಬಹುದು ಎಂಬುದನ್ನು ಊಹಿಸಿಕೊಳ್ಳಲೇಬೇಕು. ಇಂತಹ ಅಪರೂಪದ ಘಟನೆಯೊಂದು ನೆರೆಯ ಕೇರಳ ರಾಜ್ಯದಲ್ಲಿ ನಡೆದಿದೆ. ವಿಚಿತ್ರವೆನಿಸಿದರೂ ಇದು ನಿಜವಾದ ಕಥೆ. ಈ ಮದುವೆ ವಿಚಾರ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ. ಅನೇಕರು ಈ ಜೋಡಿಗೆ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ.
ಇಳಿವಯಸ್ಸಿನಲ್ಲಿ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯೊತ್ತಿದವರು 65 ವರ್ಷದ ಜಯಪ್ರಕಾಶ್ ಮತ್ತು ರಶ್ಮಿ. ಜೀವನದ ಅನಿವಾರ್ಯತೆಗಳು, ಸಂದರ್ಭಗಳು ಇವರಿಬ್ಬರನ್ನು ಬೇರೆ ದಾರಿಗಳಲ್ಲಿ ನಡೆಸಿಕೊಂಡು ಹೋಗಿದ್ದವು. ರಶ್ಮಿ ಮೊದಲು ಮದುವೆಯಾಗಿದ್ದರೆ, ಜಯಪ್ರಕಾಶ್ ವಿದೇಶಕ್ಕೆ ತೆರಳಿ ನಂತರ ಮತ್ತೊಬ್ಬರನ್ನು ವಿವಾಹವಾಗಿದ್ದರು. ಇಬ್ಬರೂ ತಮ್ಮ ತಮ್ಮ ಕುಟುಂಬಗಳನ್ನು ಕಟ್ಟಿಕೊಂಡು, ಮಕ್ಕಳನ್ನು ಬೆಳೆಸಿದ್ದರು. ಕಾಲಕ್ರಮೇಣ ರಶ್ಮಿಯವರ ಪತಿ ದಶಕದ ಹಿಂದೆ ಹಾಗೂ ಜಯಪ್ರಕಾಶ್ ಅವರ ಪತ್ನಿ ಐದು ವರ್ಷಗಳ ಹಿಂದೆ ವಿಧಿವಶರಾಗಿದ್ದರು.
ಇದನ್ನು ಓದಿ: ಗ್ಯಾರಂಟಿ ಯೋಜನೆಗಳ ಹೊರೆ: ರಾಜ್ಯದ ಸಾಲ ಪ್ರಮಾಣ ಹೆಚ್ಚಳ
ಇತ್ತೀಚೆಗೆ ರಶ್ಮಿಯವರನ್ನು ಶಾರ್ಟ್ ಮೂವಿಯಲ್ಲಿ ಕಂಡ ಜಯಪ್ರಕಾಶ್, ಕುಟುಂಬದವರ ಮೂಲಕ ಮತ್ತೆ ಸಂಪರ್ಕ ಸಾಧಿಸಿದ್ದರು. ಈ ಭೇಟಿಯೊಂದಿಗೆ ಹಳೆಯ ಪ್ರೀತಿ ಮತ್ತೆ ಜೀವಂತವಾಯಿತು. ವಿಶೇಷವೆಂದರೆ ಇವರ ಪ್ರೀತಿಗೆ ಮಕ್ಕಳೂ ಸಹ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದರು. ಪರಿಣಾಮವಾಗಿ, ಇಬ್ಬರೂ ತಮ್ಮ ಇಳಿವಯಸ್ಸಿನಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಮಕ್ಕಳು ಮತ್ತು ಮೊಮ್ಮಕ್ಕಳ ಸಮ್ಮುಖದಲ್ಲಿ ನಡೆದ ಈ ವಿವಾಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅನೇಕರು ಇವರನ್ನು ಒಂದಾಗಿಸಿದ ಮಕ್ಕಳ ಮನೋಭಾವವನ್ನು ಶ್ಲಾಘಿಸಿದ್ದಾರೆ. ಮಕ್ಕಳ ಮನಸ್ಸು ದೊಡ್ಡದು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಜೀವನದಲ್ಲಿ ಎರಡನೇ ಅವಕಾಶವೂ ಇರುತ್ತದೆ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಮಕ್ಕಳ ಪ್ರೀತಿಗೆ ಪೋಷಕರು ವಿರೋಧಿಸುವ ಸಂದರ್ಭಗಳು ಹೆಚ್ಚಾಗುತ್ತವೆ. ಆದರೆ ಇಲ್ಲಿ ಅದಕ್ಕೆ ವಿರುದ್ಧವಾಗಿ, ಮಕ್ಕಳೇ ಪೋಷಕರ ಪ್ರೀತಿಗೆ ಮದುವೆಯ ರೂಪ ಕೊಟ್ಟಿರುವುದು ಎಲ್ಲರ ಗಮನ ಸೆಳೆದಿದೆ.
ಬಹುತೇಕ ಕುಟುಂಬಗಳಲ್ಲಿ ವೃದ್ಧಾಪ್ಯದ ಪ್ರೀತಿಯನ್ನು ಒಪ್ಪಿಕೊಳ್ಳಲು ಸಮಾಜ ಹಿಂದೇಟು ಹಾಕುತ್ತದೆ. ‘ಈ ವಯಸ್ಸಿನಲ್ಲಿ ಇದೇಕೆ’ ಎಂಬ ಟೀಕೆಗಳು ಸಾಮಾನ್ಯ. ಆದರೆ ಮಕ್ಕಳು ತಮ್ಮ ಜೀವನದಲ್ಲಿ ತೊಡಗಿಸಿಕೊಂಡ ನಂತರ, ಅನೇಕ ಪೋಷಕರು ಒಂಟಿತನ ಅನುಭವಿಸುವುದು ಸತ್ಯ. ಕಷ್ಟಸುಖ ಹಂಚಿಕೊಳ್ಳಲು ಯಾರಾದರೂ ಜೊತೆಯಾಗಿದ್ದರೆ ಜೀವನ ಇನ್ನಷ್ಟು ಸುಂದರವಾಗುತ್ತದೆ ಎಂಬ ಅಭಿಪ್ರಾಯವೂ ಅನೇಕರದ್ದು. ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮೂಲಕ ತಿಳಿಸಿ.






