21 ದಿನಗಳ ಕಾಲ ಮಾತ್ರ ಪತಿಯೊಂದಿಗೆ ವಾಸಿಸಿದ್ದ ಮಹಿಳೆ, ವರದಕ್ಷಿಣೆ ಕಿರುಕುಳ ಆರೋಪದಡಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ವಿವಾಹವು ಸ್ವರ್ಗದಲ್ಲಿ ನಿಶ್ಚಯವಾಗುವ ಪವಿತ್ರ ಬಂಧನವಾಗಿದ್ದು, ಭೂಮಿಯಲ್ಲಿ ನಡೆಯುವ ಶಾಶ್ವತ ಸಂಬಂಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಹಿಂದೂ ಕಾನೂನಿನ ಪ್ರಕಾರ ವಿವಾಹ ಕೇವಲ ಒಪ್ಪಂದವಲ್ಲ, ಅದು ಪವಿತ್ರ ಹಾಗೂ ಶಾಶ್ವತ ಒಗ್ಗೂಡುವಿಕೆಯ ಸಂಕೇತವಾಗಿದೆ ಎಂದು ಪೀಠ ತಿಳಿಸಿದೆ.
ವಿವಾಹವು ಸ್ವರ್ಗದಲ್ಲೇ ನಿಶ್ಚಯವಾಗಿದ್ದು, ಭೂಮಿಯಲ್ಲಿ ನೆರವೇರುವ ದೈವಿಕ ಬಂಧನ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ ಎಂದು ನ್ಯಾಯಾಲಯ ಹೇಳಿದೆ. ಅಗ್ನಿಸಾಕ್ಷಿಯಾಗಿ ವಧು-ವರರು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಪಾಲಿಸುವ ಪ್ರತಿಜ್ಞೆ ಮಾಡುವ ಮೂಲಕ ಜೀವನಪೂರ್ಣ ಒಗ್ಗಟ್ಟಿಗೆ ಬದ್ಧರಾಗುತ್ತಾರೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿವಾಹವು ಕೇವಲ ಸಾಮಾಜಿಕ ಒಪ್ಪಂದವಲ್ಲದೆ ವಿಧಿಯಿಂದ ವಿಧಿಸಲ್ಪಟ್ಟ ದೈವಿಕ ಪಾಲುದಾರಿಕೆಯ ಸಂಕೇತವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಅರ್ಜಿದಾರ ಮಹಿಳೆ ಮದುವೆಯನ್ನು ಮಕ್ಕಳಾಟದಂತೆ ಕಾಣಿಸಿ, ತನ್ನ ವಿದ್ಯಾಭ್ಯಾಸ ಮುಂದುವರೆಸಲು ಪೋಷಕರ ಮನೆಗೆ ಹೋಗುವ ಉದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡಿರುವ ಸಾಧ್ಯತೆ ಇದೆ ಎಂದು ಪೀಠ ಗಮನಿಸಿದೆ.
ಪತ್ನಿ ಕೇವಲ 21 ದಿನಗಳ ಕಾಲ ಮಾತ್ರ ಪತಿಯೊಂದಿಗೆ ವಾಸಿಸಿದ್ದರೆಂದು ಪೀಠ ಉಲ್ಲೇಖಿಸಿದೆ. ಈ ಅವಧಿಯಲ್ಲಿ ದಂಪತಿಯ ನಡುವೆ ಯಾವುದೇ ಗಂಭೀರ ಗೊಂದಲಗಳಿದ್ದವು ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್ ಹೇಳಿದೆ. ಆದರೆ, ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಮನೆಗೆ ಹಿಂತಿರುಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ ಎಂದು ಪೀಠ ಗಮನಿಸಿದೆ.
ವಾಸ್ತವವಾಗಿ ಅಷಾಢ ಮಾಸದ ಕಾರಣದಿಂದ ಪತ್ನಿ ತಾಯಿ ಮನೆಗೆ ತೆರಳಿದ್ದಾಳೆ ಎಂಬ ಅಂಶ ದಾಖಲೆಗಳಿಂದ ತಿಳಿದುಬರುತ್ತದೆ ಎಂದು ನ್ಯಾಯಾಲಯ ಹೇಳಿದೆ. ವರದಕ್ಷಿಣೆ ಕಿರುಕುಳ ನೀಡಿ ಪತಿಯ ಮನೆದಿಂದ ಹೊರಹಾಕಲಾಗಿದೆ ಎಂಬ ಆರೋಪ ಸಂಶಯಾಸ್ಪದವಾಗಿದ್ದು, ನಂಬಿಕೆ ಮೂಡಿಸುವಂತಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ, ಅರ್ಜಿದಾರರ ನಡವಳಿಕೆ ವಿಶ್ವಾಸಾರ್ಹವಾಗಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಕೇವಲ ವಿಚ್ಛೇದನ ಪಡೆಯುವ ಉದ್ದೇಶದಿಂದ ವರದಕ್ಷಿಣೆ ಕಿರುಕುಳದ ಆರೋಪ ಮಾಡಲಾಗಿದೆ ಎಂಬ ನಿರ್ಣಯಕ್ಕೆ ಪೀಠ ಬಂದಿದೆ.
ಪ್ರಕರಣದ ಹಿನ್ನೆಲೆಯಾಗಿ, 2012ರ ಮೇ 30ರಂದು ಬೆಂಗಳೂರು ನಿವಾಸಿಗಳಾದ ಈ ದಂಪತಿಯ ವಿವಾಹ ನೆರವೇರಿತ್ತು. ಮದುವೆಯ ನಂತರ ಪತ್ನಿ ತುಮಕೂರಿನಲ್ಲಿ ಪತಿಯ ಮನೆಯಲ್ಲಿ 21 ದಿನಗಳ ಕಾಲ ವಾಸಿಸಿದ್ದರು. ಪತಿ ಹೆಚ್ಚುವರಿ 50 ಸಾವಿರ ರೂ. ವರದಕ್ಷಿಣೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ಪ್ರಕರಣದಲ್ಲಿತ್ತು.
ಹೆಚ್ಚುವರಿ ವರದಕ್ಷಿಣೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದಂಪತಿಯ ನಡುವೆ ಕಲಹ ಉಂಟಾಯಿತು ಎಂದು ಪತ್ನಿ ಆರೋಪಿಸಿದ್ದಾಳೆ. ಬಳಿಕ ವಿಚ್ಛೇದನ, ಶಾಶ್ವತ ಪರಿಹಾರ ಹಾಗೂ ಜೀವನಾಂಶ ಕೋರಿ ಮಹಿಳೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಹೈಕೋರ್ಟ್ ಕೂಡ ಅರ್ಜಿಯನ್ನು ತಿರಸ್ಕರಿಸಿದೆ.
21 ದಿನ ಗಂಡನ ಸಂಸಾರ!! ಮದುವೆ ಮಕ್ಕಳಾಟವಲ್ಲ, ಪವಿತ್ರ ಒಗ್ಗೂಡುವಿಕೆ: ವಿಚ್ಛೇದನ ಅರ್ಜಿಗೆ ಬ್ರೇಕ್ ಹಾಕಿದ ಹೈಕೋರ್ಟ್
By krutika naik
On: December 19, 2025 3:06 AM
---Advertisement---






