ಕಲಬುರಗಿಯಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಚಿನ್ನಾಭರಣ ಕದಿಯುತ್ತಿದ್ದ ಮೂವರು ಮಹಿಳಾ ಸರಗಳ್ಳಿಯರ ಗ್ಯಾಂಗ್‌ನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಸ್ ನಿಲ್ದಾಣಗಳು ಹಾಗೂ ಬಸ್ಸುಗಳಲ್ಲಿ ಪ್ರಯಾಣಿಕರ ಗಮನವನ್ನು ಬೇರೆಡೆ ಸೆಳೆದು ನೆಕ್ಲೇಸ್, ಉಂಗುರ, ಕಿವಿಯೋಲೆ, ಮಾಂಗಲ್ಯ ಸರ ಸೇರಿದಂತೆ ಅಮೂಲ್ಯ ಆಭರಣಗಳನ್ನು ಕದಿಯುತ್ತಿದ್ದ ಆರೋಪಿಗಳು ಇದೀಗ ಖಾಕಿಯ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಲಬುರಗಿ, ಡಿಸೆಂಬರ್ 25:
ಮಹಿಳೆಯರ ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಇದೇ ಯೋಜನೆಯನ್ನು ಬಂಡವಾಳ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಆಭರಣಗಳನ್ನು ಕದಿಯುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್‌ನ್ನು ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕಲಬುರಗಿ ನಗರದ ಮಾಂಗರವಾಡಿ ಬಡಾವಣೆಯ ನಿವಾಸಿಗಳಾದ ಚಿಮನ್ ಕಾಂಬಳೆ, ಶಕೀಲಾಬಾಯಿ ಉಪಾಧ್ಯಾ ಹಾಗೂ ಮಾಧುರಿ ಎಂದು ಗುರುತಿಸಲಾಗಿದೆ. ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಈ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಾ ಕಲಬುರಗಿ ನಗರದಿಂದ ಸೇಡಂ, ಶಹಾಬಾದ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ಸಂಚರಿಸಿ ಕಳ್ಳತನ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಸ್ ನಿಲ್ದಾಣಗಳಲ್ಲಿ ಚಿನ್ನಾಭರಣ ಧರಿಸಿದ್ದ ಮಹಿಳಾ ಪ್ರಯಾಣಿಕರನ್ನು ಮೊದಲು ಗುರಿಯಾಗಿಸಿಕೊಂಡು, ಅವರು ಬಸ್ ಹತ್ತುವ ಸಮಯದಲ್ಲಿ ಸುತ್ತುವರಿದು ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಚಿನ್ನದ ನೆಕ್ಲೇಸ್, ಪದಕ, ಉಂಗುರ, ಕಿವಿಯೋಲೆ ಹಾಗೂ ಮಾಂಗಲ್ಯ ಸರಗಳನ್ನು ಕಟ್ ಮಾಡಿ ಯಾರಿಗೂ ಅನುಮಾನ ಬಾರದಂತೆ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಹಲವು ತಿಂಗಳಿಂದ ಮಹಿಳಾ ಪ್ರಯಾಣಿಕರಿಗೆ ಆತಂಕ ಉಂಟುಮಾಡಿದ್ದ ಈ ಸರಗಳ್ಳಿಯರ ಚಲನವಲನಗಳು ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಅದನ್ನು ಆಧರಿಸಿ ಪೊಲೀಸರು ಗ್ಯಾಂಗ್‌ನ್ನು ಭೇದಿಸಿದ್ದಾರೆ. ಆರೋಪಿಗಳ ವಿರುದ್ಧ ಸೇಡಂ ಮತ್ತು ಶಹಾಬಾದ್ ಪೊಲೀಸ್ ಠಾಣೆಗಳಲ್ಲಿ ಒಟ್ಟು ಮೂರು ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.
ಬಂಧಿತರಿಂದ 110 ಗ್ರಾಂ ಚಿನ್ನಾಭರಣಗಳು (ಮೌಲ್ಯ ಸುಮಾರು 14 ಲಕ್ಷ ರೂ.), ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.






