ಅಚ್ಚರಿಯಾದರೂ ನಂಬಲೇಬೇಕಾದ ಸಂಗತಿ ಇದು. ಇನ್ನೂ ಗಂಭೀರವಾದ ವಿಚಾರವೆಂದರೆ, ಕೆಲ ಸರ್ಕಾರಿ ಅಧಿಕಾರಿಗಳೇ ಹಣದ ಲಾಲಸೆಗೆ ಒಳಗಾಗಿ ನಕಲಿ ದಾಖಲೆಗಳಿಗೆ ಸಹಿ ಹಾಕಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಸೇರಿದಂತೆ ಇತರೆ ಗುರುತಿನ ಚೀಟಿಗಳನ್ನು ಪಡೆಯಲು ನೆರವಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದೇ ವೇಳೆ, ರಾಜಕೀಯ ಮುಖಂಡರಿಂದಲೂ ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಸೃಷ್ಟಿಸಿಕೊಡಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿ ಬಂದಿವೆ. ಕೆಲ ಬಾಂಗ್ಲಾದೇಶಿಗರು ಸ್ಥಳೀಯರ ಅನುಮಾನ ತಪ್ಪಿಸಲು ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿರುವ ಪ್ರಕರಣಗಳೂ ಪತ್ತೆಯಾಗಿವೆ.
ಇದನ್ನು ಓದಿ: ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಗಾಳ: ವ್ಯಕ್ತಿ ವಂಚನೆ ಕಂಡು ಯುವತಿ ಕಕ್ಕಾಬಿಕ್ಕಿ
ಗುಪ್ತಚರ ಇಲಾಖೆ ಮೂಲಗಳ ಪ್ರಕಾರ, ರಾಜ್ಯದಲ್ಲಿರುವ ಲಕ್ಷಾಂತರ ಬಾಂಗ್ಲಾದೇಶಿ ಪ್ರಜೆಗಳ ಪೈಕಿ ಶೇ.80ರಷ್ಟು ಮಂದಿ ಈಗಾಗಲೇ ಭಾರತೀಯ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಇವರಲ್ಲಿ ಕೆಲವರ ದಾಖಲೆಗಳ ಪರಿಶೀಲನೆ ವೇಳೆ ಅವರ ಹಿಂದಿನ ತಲೆಮಾರು ಇನ್ನೂ ಬಾಂಗ್ಲಾದೇಶದಲ್ಲೇ ನೆಲೆಸಿರುವುದು ಬೆಳಕಿಗೆ ಬಂದಿದೆ.
ಇನ್ನು ಕೆಲವರು ಕಳೆದ 20–25 ವರ್ಷಗಳಿಂದ ರಾಜ್ಯದಲ್ಲೇ ವಾಸವಿದ್ದು, ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮಧ್ಯವರ್ತಿಗಳ ಸಹಾಯದಿಂದ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮಾತ್ರವಲ್ಲದೆ, ವಾಹನ ಚಾಲನಾ ಪರವಾನಿಗೆ, ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್, ರೇಷನ್ ಕಾರ್ಡ್ ಪಡೆದು, ಸ್ಥಳೀಯ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಲಕ್ಷಾಂತರ ರೂ.ಗಳ ವಹಿವಾಟು ನಡೆಸಿರುವುದೂ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಗೆಜೆಟೆಡ್ ಅಧಿಕಾರಿಗಳ ಸೀಲು ಮತ್ತು ಸಹಿ ಇರುವ ಲೆಟರ್‌ಹೆಡ್ ಇದ್ದರೆ ಆಧಾರ್ ಮಾಡಿಕೊಡಲು ಅವಕಾಶವಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಮಧ್ಯವರ್ತಿಗಳು, ನಿರ್ದಿಷ್ಟ ಕಚೇರಿಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಣದ ಆಮಿಷವೊಡ್ಡಿ ಬಾಂಗ್ಲಾದೇಶಿಯರಿಗೆ ಬೇಕಾದ ದಾಖಲೆಗಳನ್ನು (ಜನನ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ ಮುಂತಾದವು) ಸೃಷ್ಟಿಸುತ್ತಿದ್ದರು. ಬಳಿಕ ಅವುಗಳಿಗೆ ಗೆಜೆಟೆಡ್ ಮಟ್ಟದ ಅಧಿಕಾರಿಗಳ ಹೆಸರಿನ ಸೀಲು ಹಾಗೂ ಸಹಿ ಪಡೆದು, ನಾಲ್ಕೈದು ದಿನಗಳಲ್ಲಿ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿತ್ತು.
ಕೆಲವೊಮ್ಮೆ ಗೆಜೆಟೆಡ್ ಅಧಿಕಾರಿಗಳ ಹೆಸರಿನ ನಕಲಿ ಲೆಟರ್‌ಹೆಡ್, ಸೀಲು ಹಾಗೂ ಸಹಿಗಳನ್ನು ಕೂಡ ಬಳಸಲಾಗಿದೆ. ಪ್ರತಿ ಸಹಿಗೆ 2–3 ಸಾವಿರ ರೂ. ಲಂಚ ನೀಡಲಾಗುತ್ತಿತ್ತು. ಹೀಗೆ ಒಟ್ಟಾರೆ 10–15 ಸಾವಿರ ರೂ.ಗೆ ವಲಸಿಗರಿಗೆ ಸ್ಥಳೀಯ ದಾಖಲೆಗಳನ್ನು ಮಾಡಿಸಿಕೊಡಲಾಗುತ್ತಿದೆ.
ಚುನಾವಣೆಗೆ ಒಂದು ವರ್ಷ ಅಥವಾ ಆರು ತಿಂಗಳ ಮೊದಲು ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಜಾಗೃತಿ ಆರಂಭಿಸುತ್ತದೆ. ಇದೇ ಸಂದರ್ಭವನ್ನು ಬಳಸಿಕೊಂಡು, ಕೆಲವು ರಾಷ್ಟ್ರೀಯ ಹಾಗೂ ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಕ್ಷೇತ್ರದಲ್ಲಿನ ಜನರಿಗೆ ಗುರುತಿನ ಚೀಟಿ ಕೊಡಿಸುವ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಮಾಡಿಸಿಕೊಡುತ್ತಿದ್ದಾರೆ ಎಂಬ ಆರೋಪವೂ ಇದೆ.
ಬೆಂಗಳೂರು ಒನ್ ಕೇಂದ್ರಗಳಲ್ಲಷ್ಟೇ ಅಲ್ಲದೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳಲ್ಲಿಯೂ ಕೆಲವು ಅಧಿಕಾರಿ-ಸಿಬ್ಬಂದಿ ನಕಲಿ ದಾಖಲೆ ಸೃಷ್ಟಿಸಲು ನೆರವಾಗಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಈ ಹಿಂದೆ ಇ-ಆಡಳಿತ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಲಾಗಿನ್ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಆಧಾರ್ ಕೇಂದ್ರಗಳು ಹಾಗೂ ಸೈಬರ್ ಕೇಂದ್ರಗಳಿಂದಲೂ ಆಧಾರ್ ಕಾರ್ಡ್‌ಗಳನ್ನು ಪಡೆಯಲಾಗಿದೆ.
ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರು ಸಾಮಾನ್ಯವಾಗಿ ಪಶ್ಚಿಮ ಬಂಗಾಳದ ಮೂಲಕ ಭಾರತ ಪ್ರವೇಶಿಸಿ, ನಂತರ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ತೆರಳುತ್ತಾರೆ. ಪಶ್ಚಿಮ ಬಂಗಾಳದಲ್ಲಿರುವ ಮಧ್ಯವರ್ತಿಗಳು ಗಡಿ ಭದ್ರತಾ ಪಡೆಗಳ ಕೆಲ ಸಿಬ್ಬಂದಿಗೆ ಹಣದ ಆಮಿಷವೊಡ್ಡಿ ಬಾಂಗ್ಲಾದೇಶಿಗರನ್ನು ಒಳಗೆ ಕರೆಸಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಬಳಿಕ ಅಸ್ಸಾಂ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಗುರುತಿನ ಚೀಟಿಗಳನ್ನು ಮಾಡಿಸಿಕೊಡಲಾಗುತ್ತದೆ. ಪ್ರತಿ ವ್ಯಕ್ತಿಗೆ 15–20 ಸಾವಿರ ರೂ.ಗಳನ್ನು ಮಧ್ಯವರ್ತಿಗಳು ಪಡೆಯುತ್ತಾರೆ ಎನ್ನಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಪೋಡು ಗ್ರಾಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮನೆಗಳಿಗೆ ಭೇಟಿ ನೀಡಿದ್ದ ಹಿಂದೂ ಸಂಘಟನೆಯೊಂದು ದಾಖಲೆಗಳ ಪರಿಶೀಲನೆ ನಡೆಸಿದಾಗ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಕೇವಲ 1,500 ರೂ.ಗೆ ವಿಭಿನ್ನ ಎರಡು ವಿಳಾಸಗಳಿಗೆ ಆಧಾರ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದೆ. ಅಲ್ಲದೆ, ಬ್ಯಾಂಕ್‌ವೊಂದು ಆಧಾರ್ ಕಾರ್ಡ್ ಆಧಾರದ ಮೇಲೆ 4.5 ಲಕ್ಷ ರೂ. ವೈಯಕ್ತಿಕ ಸಾಲ ನೀಡಿರುವುದೂ ಬೆಳಕಿಗೆ ಬಂದಿದೆ. ಸಾಲ ಪಡೆದ ವ್ಯಕ್ತಿ ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ.
ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಮಧ್ಯವರ್ತಿಗಳ ಸಹಾಯದಿಂದ ಅಕ್ರಮ ವಲಸಿಗರಿಗೆ ಪಶ್ಚಿಮ ಬಂಗಾಳ ಅಥವಾ ಈಶಾನ್ಯ ಭಾರತದ ರಾಜ್ಯಗಳ ನಿವಾಸಿಗಳೆಂದು ತೋರಿಸುವ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಪತ್ತೆ ಕಷ್ಟವಾಗುತ್ತಿದೆ. ಭಾಷೆ ಮತ್ತು ಸ್ಥಳೀಯ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸುವುದಷ್ಟೇ ಮಾರ್ಗವಾಗಿದೆ. ದಾಖಲೆಗಳ ಆಧಾರದ ಮೇಲೆ ಪ್ರಶ್ನಿಸಿದರೆ, ಕೆಲವರು ಕೋರ್ಟ್ ಅಥವಾ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿರುವ ಉದಾಹರಣೆಗಳೂ ಇವೆ.
ಪ್ರಮುಖ ಪ್ರಕರಣಗಳು
1. ಅಕ್ರಮ ಬಾಂಗ್ಲಾದೇಶಿ ಪ್ರಜೆಗಳಿಗೆ 1,000 ರೂ.ಗೆ ಆಧಾರ್ ಕಾರ್ಡ್ ಮಾಡಿಸಿಕೊಡುತ್ತಿದ್ದ ಬೆಂಗಳೂರು ಒನ್ ಕೇಂದ್ರದ ಗುತ್ತಿಗೆ ನೌಕರ ಸೇರಿ ಮೂವರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿಗಳಾದ ನೌಷದ್ ಪಾಷಾ, ಸೈಬರ್ ಕೇಂದ್ರದ ವಿಜಯ್ ಕುಮಾರ್ ಹಾಗೂ ಬಾಂಗ್ಲಾದೇಶಿ ಪ್ರಜೆ ಜುವೇಲ್ ರಾಣಾ ಬಂಧಿತರಾಗಿದ್ದರು.
2. ಬಾಂಗ್ಲಾದೇಶಿಗರಿಗೆ ನಕಲಿ ದಾಖಲೆ ಸೃಷ್ಟಿಸಿಕೊಡುತ್ತಿದ್ದ ಬಿಬಿಎಂಪಿ ಫಾರ್ಮಾಸಿಸ್ಟ್ ಸೇರಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಬಿಎಂಪಿ ವೈದ್ಯಾಧಿಕಾರಿಗಳ ನಕಲಿ ಸಹಿ ಹಾಗೂ ಸೀಲು ಬಳಸಿ ಲೆಟರ್‌ಹೆಡ್ ಸೃಷ್ಟಿಸಿ ದಾಖಲೆಗಳನ್ನು ನೀಡಲಾಗುತ್ತಿತ್ತು.
3. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಅನುಶ್ರೀಯನ್ನು ಪೊಲೀಸರು ಬಂಧಿಸಿದ್ದರು. ಲಂಚ ಪಡೆದು ನಕಲಿ ಜನ್ಮ ದಿನಾಂಕ ಸೃಷ್ಟಿಸಿ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಡುತ್ತಿದ್ದಳು.
4. 12 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಬಾಂಗ್ಲಾ ಪ್ರಜೆ ಸುಮೊನ್ ಅಲ್ಮಮೂನ್ ಮೊಹಮ್ಮದ್, ಹೆಸರು ಬದಲಿಸಿಕೊಂಡು ಓಲಾ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತನಾಗಿದ್ದ.
ಹಿಂದೂ ಹೆಸರು ಇಟ್ಟುಕೊಂಡಿದ್ದ ರೋನಿ ಬೇಗಂ
15 ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಬಂದಿದ್ದ ರೋನಿ ಬೇಗಂ, ನಕಲಿ ದಾಖಲೆಗಳ ಮೂಲಕ ‘ಪಾಯಲ್ ಘೋಷ್’ ಎಂಬ ಹಿಂದೂ ಹೆಸರು ಇಟ್ಟುಕೊಂಡು ಬದುಕುತ್ತಿದ್ದಳು. ಈಕೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮುಂಬೈನಲ್ಲಿ ಬಾರ್ ಡ್ಯಾನ್ಸರ್ ಆಗಿದ್ದ ಈಕೆ, ಮಂಗಳೂರಿನ ಯುವಕನನ್ನು ಪ್ರೀತಿಸಿ ಮದುವೆಯಾಗಲು ಬೆಂಗಳೂರಿಗೆ ಬಂದಿದ್ದಳು. ಬಾಂಗ್ಲಾದೇಶಕ್ಕೆ ತೆರಳುವಾಗ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಳು.






