ನಮ್ಮ ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ಈ ಕುರಿತು ಯುವತಿ ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದು, ಆರೋಪಿತ ವ್ಯಕ್ತಿಯನ್ನು ಸಿಬ್ಬಂದಿ ಹಾಗೂ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಬೆಳಗಾವಿ ಮೂಲದ 45 ವರ್ಷದ ಮುತ್ತಪ್ಪ ಎಂಬಾತ ಈ ದುರ್ವರ್ತನೆ ಎಸಗಿದವನಾಗಿದ್ದು, ಖಾಸಗಿ ಕಂಪನಿಯಲ್ಲಿ ಹೌಸ್ಕೀಪರ್ ಆಗಿ ಕೆಲಸ ಮಾಡುತ್ತಿದ್ದಾನೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಿ, ಎಚ್ಚರಿಕೆ ನೀಡಿ ಆತನನ್ನು ಬಿಡುಗಡೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಬಗ್ಗೆ ಯುವತಿ ವಿಡಿಯೋ ಹಂಚಿಕೊಂಡಿದ್ದು, ತನ್ನ ಮೇಲೆ ಅಸಭ್ಯ ವರ್ತನೆ ನಡೆಸಿದ ವ್ಯಕ್ತಿಯ ವಿರುದ್ಧ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾಳೆ. ಆರೋಪಿಯ ವಯಸ್ಸು ಹಾಗೂ ಮದ್ಯಪಾನದ ಅಮಲಿನಲ್ಲಿದ್ದ ಕಾರಣ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಮುತ್ತಪ್ಪನ ದುರ್ವರ್ತನೆಯ ಕುರಿತು ಯುವತಿ ಮೊದಲಿಗೆ ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಸಿಬ್ಬಂದಿ ಆತನನ್ನು ತರಾಟೆಗೆ ತೆಗೆದುಕೊಂಡು, ನಿಮ್ಮ ವಯಸ್ಸನ್ನು ನೋಡಿದರೆ 60 ದಾಟಿದಂತೆ ಕಾಣುತ್ತದೆ, ಇಂತಹ ವರ್ತನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮುತ್ತಪ್ಪ ಕ್ಷಮೆ ಕೇಳುತ್ತಿರುವ ದೃಶ್ಯವೂ ವಿಡಿಯೋದಲ್ಲಿ ದಾಖಲಾಗಿರುವುದು ಗಮನಾರ್ಹವಾಗಿದೆ.






