ಭೂಮಿಯ ಯಾವುದೇ ಮೂಲೆಗೆ ಹೋದರೂ ಅಲ್ಲಿ ದೇವಸ್ಥಾನ, ಮಸೀದಿ ಅಥವಾ ಚರ್ಚ್ ಕಾಣುವುದು ಸಹಜ. ಆದರೆ ಧರ್ಮವನ್ನೇ ದೇಶದ ಅತಿದೊಡ್ಡ ಅಪಾಯ ಎಂದು ಪರಿಗಣಿಸುವ ರಾಷ್ಟ್ರವೂ ಇದೆ. ಆ ವಿಶಿಷ್ಟ ದೇಶವೇ ಉತ್ತರ ಕೊರಿಯಾ. ಇಲ್ಲಿ ಧರ್ಮವನ್ನು ಪಾಲಿಸುವುದು ಕಾನೂನುಬಾಹಿರವಾಗಿದ್ದು, ಅದನ್ನು ವಿದೇಶದಿಂದ ಬಂದ ವಿಷದಂತೆ ನೋಡಲಾಗುತ್ತದೆ.
ಉತ್ತರ ಕೊರಿಯಾ ತನ್ನನ್ನು ಅಧಿಕೃತವಾಗಿ ನಾಸ್ತಿಕ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ಇಲ್ಲಿನ ಮಕ್ಕಳಿಗೆ ಬಾಲ್ಯದಿಂದಲೇ ಧರ್ಮವೆಂದರೆ ಜನರನ್ನು ದಾರಿ ತಪ್ಪಿಸುವ ವಿದೇಶಿ ಆಲೋಚನೆ ಎಂಬ ಬೋಧನೆ ನೀಡಲಾಗುತ್ತದೆ.
ಯಾವುದೇ ಸಂಘಟಿತ ಧಾರ್ಮಿಕ ನಂಬಿಕೆಯನ್ನು ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿದ್ದು, ಆಡಳಿತದ ದೃಷ್ಟಿಯಲ್ಲಿ ಧರ್ಮವೇ ಅತಿದೊಡ್ಡ ಶತ್ರುವಾಗಿದೆ.
ಉತ್ತರ ಕೊರಿಯಾ ಸರ್ಕಾರ ಧರ್ಮವನ್ನು ವಿರೋಧಿಸುವುದಕ್ಕೆ ಪ್ರಮುಖ ಕಾರಣವಿದೆ. ಜನರು ದೇವರ ಮೇಲೆ ನಂಬಿಕೆ ಇಟ್ಟರೆ ಸರ್ಕಾರದ ಮೇಲಿನ ನಿಷ್ಠೆ ಕಡಿಮೆಯಾಗಬಹುದು ಎಂಬ ಭೀತಿ ಆಡಳಿತಕ್ಕೆ ಇದೆ. ರಾಜ್ಯಕ್ಕಿಂತ ಮಿಗಿಲಾದ ಶಕ್ತಿಯನ್ನು ಜನರು ನಂಬಬಾರದು ಎಂಬುದೇ ಇಲ್ಲಿನ ಮೂಲ ತತ್ವ. ವೈಯಕ್ತಿಕ ನಂಬಿಕೆಗಳನ್ನೂ ಸಹ ದೇಶದ್ರೋಹದ ಚಟುವಟಿಕೆಯಂತೆ ಇಲ್ಲಿ ಪರಿಗಣಿಸಲಾಗುತ್ತದೆ.
ಇಲ್ಲಿ ಗುಪ್ತವಾಗಿ ಧರ್ಮ ಆಚರಿಸಿದರೂ ಅದರ ಪರಿಣಾಮಗಳು ಗಂಭೀರವಾಗಿರುತ್ತವೆ. ಯಾರ ಬಳಿಯೇ ಬೈಬಲ್, ಕುರಾನ್ ಅಥವಾ ಯಾವುದೇ ಧಾರ್ಮಿಕ ಗ್ರಂಥಗಳು ಸಿಕ್ಕರೂ ದೀರ್ಘಾವಧಿಯ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕೆಲವರನ್ನು ಬಲವಂತದ ಕಾರ್ಮಿಕ ಶಿಬಿರಗಳಿಗೆ ಕಳುಹಿಸಲಾಗುತ್ತದೆ, ಇನ್ನೂ ಕೆಲ ಸಂದರ್ಭಗಳಲ್ಲಿ ಮರಣದಂಡನೆಯೂ ವಿಧಿಸಲ್ಪಟ್ಟಿದೆ.
ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಕೆಲವು ಚರ್ಚ್ ಹಾಗೂ ದೇವಾಲಯಗಳು ಕಾಣಸಿಗುತ್ತವೆ. ಆದರೆ ಇವು ನಿಜವಾದ ಧಾರ್ಮಿಕ ಕೇಂದ್ರಗಳಲ್ಲವೆಂದು ಅಂತರರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳು ಹೇಳುತ್ತವೆ. ವಿದೇಶಿಗರನ್ನು ಮರುಳುಗೊಳಿಸಲು ನಿರ್ಮಿಸಿದ ಕೇವಲ ಪ್ರದರ್ಶನದ ಕಟ್ಟಡಗಳಾಗಿದ್ದು, ಅಲ್ಲಿ ನೈಜ ಆರಾಧನೆ ನಡೆಯುವುದಿಲ್ಲ.
ಇಲ್ಲಿನ ನಾಗರಿಕರು ಯಾವುದೇ ದೇವರನ್ನು ಪೂಜಿಸುವಂತಿಲ್ಲ. ಅದರ ಬದಲು ಆಡಳಿತದಲ್ಲಿರುವ ಕಿಮ್ ಕುಟುಂಬದ ಮೇಲೆಯೇ ಸಂಪೂರ್ಣ ಭಕ್ತಿ ತೋರಿಸಬೇಕಾಗುತ್ತದೆ. ಪ್ರಸ್ತುತ ನಾಯಕ ಕಿಮ್ ಜಾಂಗ್-ಉನ್ ಹಾಗೂ ಅವರ ತಂದೆ–ಅಜ್ಜರ ಚಿತ್ರಗಳನ್ನು ದೇವರಿಗಿಂತ ಮಿಗಿಲಾಗಿ ಗೌರವಿಸುವಂತೆ ಜನರಿಗೆ ಬೋಧಿಸಲಾಗುತ್ತದೆ. ಕಿಮ್ ಕುಟುಂಬದ ಸಿದ್ಧಾಂತವೇ ಇಲ್ಲಿನ ಪರಮ ಧರ್ಮವಾಗಿದೆ.
ಉತ್ತರ ಕೊರಿಯಾದಲ್ಲಿ ಧರ್ಮದ ಮೇಲಿನ ನಿರ್ಬಂಧ ಸಾರ್ವಜನಿಕ ಜೀವನಕ್ಕೆ ಮಾತ್ರ ಸೀಮಿತವಲ್ಲ, ಖಾಸಗಿ ಬದುಕಿನಲ್ಲೂ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಪ್ರತಿಯೊಬ್ಬ ನಾಗರಿಕನ ಮೇಲೂ ನಿಗಾ ವಹಿಸಲು ಗೂಢಚಾರರ ಜಾಲವಿದೆ. ಮನೆಯೊಳಗೇ ರಹಸ್ಯವಾಗಿ ದೇವರನ್ನು ನೆನೆದರೂ ಮಾಹಿತಿ ಹೊರಬಂದರೆ ಸಾಕು, ಕ್ಷಣಾರ್ಧದಲ್ಲಿ ಭದ್ರತಾ ಪಡೆಗಳು ಮನೆ ಬಾಗಿಲಿಗೆ ಬರುತ್ತವೆ. ಇಂತಹ ಕಠಿಣ ಕಣ್ಗಾವಲಿನ ನಡುವೆ ಅಲ್ಲಿನ ಜನ ಬದುಕು ಸಾಗಿಸುತ್ತಿದ್ದಾರೆ.






