ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಮಹಿಳೆಯರ ಸುರಕ್ಷತೆ ಪ್ರಶ್ನೆಯಾಗಿದೆ. ಇತ್ತೀಚೆಗೆ ನಡೆದ ಘಟನೆಯಲ್ಲಿ ಯುವತಿಯೊಬ್ಬಳು ಸ್ಕರ್ಟ್ ಧರಿಸಿದ್ದಕ್ಕಾಗಿ ಆಟೋ ಚಾಲಕನೊಬ್ಬ ಆಕೆಗೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಬೆಂಗಳೂರು ಮಹಿಳೆಯರಿಗೆ ನಿಜಕ್ಕೂ ಸುರಕ್ಷಿತವೇ?” ಎಂಬ ಪ್ರಶ್ನೆ ಮತ್ತೆ ಎದ್ದಿದೆ.
ಘಟನೆಯ ವಿವರ ಹೀಗಿದೆ, ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಇಂದಿರಾನಗರ ಕಡೆ ಆಟೋದಲ್ಲಿ ಪ್ರಯಾಣಿಸುತ್ತಿದ್ದಳು. ತಲುಪಿದ ನಂತರ ಆಟೋ ಇಳಿದ ಕೂಡಲೇ ಚಾಲಕ ಅಸಹನೆಯಿಂದ ಮಾತನಾಡಲು ಆರಂಭಿಸಿದ್ದಾನೆ. ಪ್ರಾರಂಭದಲ್ಲಿ ಆಕೆ ಮತ್ತು ಆಕೆಯ ಸ್ನೇಹಿತ ಅವರು ಚಾಲಕನ ಮಾತುಗಳಿಗೆ ಅರ್ಥ ಮಾಡಿಕೊಳ್ಳದೇ ಅಲ್ಲಿ ದೂರ ಸರಿದರು. ಆದರೆ ಕೆಲವೇ ಕ್ಷಣಗಳಲ್ಲಿ ಆ ಚಾಲಕ ಮತ್ತೆ ಬಂದು ಆಕೆಯ ಮೇಲೆ ಕೋಪದಿಂದ ಬಾಯಿಬಿಟ್ಟಿದ್ದಾನೆ.
ಯುವತಿ ಯಾಕೆ ಹೀಗೆ ವರ್ತಿಸುತ್ತಿದ್ದೀರಿ ಎಂದು ಕೇಳಿದಾಗ, ಆಟೋ ಚಾಲಕ “ನೀನು ಇಷ್ಟು ಚಿಕ್ಕ ಸ್ಕರ್ಟ್ ಹಾಕಿಕೊಂಡು ಬಂದಿದ್ದೀಯಾ ಯಾಕೆ?” ಎಂದು ಕೇಳಿದ್ದಾನೆ. ಇದಕ್ಕೆ ಆಕೆಯ ಸ್ನೇಹಿತ ಸಮಾಧಾನದಿಂದ “ಅದು ಅವಳ ವೈಯಕ್ತಿಕ ಆಯ್ಕೆ, ಅವಳು ಹೇಗೆ ಬಟ್ಟೆ ಧರಿಸಬೇಕು ಎನ್ನುವುದು ಅವಳ ವಿಷಯ, ನಿಮಗೆ ಅದರಲ್ಲಿ ಏನೂ ತಲೆ ಹಾಕಬೇಕಾಗಿಲ್ಲ” ಎಂದು ಹೇಳಿದ್ದಾನೆ.
ಈ ಮಾತುಗಳಿಂದ ಕೋಪಗೊಂಡ ಚಾಲಕ, “ಅವಳು ಇದೇ ತರಹದ ಬಟ್ಟೆ ಹಾಕಿಕೊಂಡು ಬಂದರೆ ಜನ ಅತ್ಯಾಚಾರ ಮಾಡುತ್ತಾರೆ, ನಾನು ಕೂಡ ಅತ್ಯಾಚಾರ ಮಾಡುತ್ತೇನೆ” ಎಂದು ನೇರವಾಗಿ ಬೆದರಿಕೆ ಹಾಕಿದ್ದಾನೆ. ಮಧ್ಯಾಹ್ನದ ಹೊತ್ತಿನಲ್ಲಿ ಜನ ಸಾಗಾಟ ಹೆಚ್ಚಿರುವ ಪ್ರದೇಶದಲ್ಲಿ, ಓರ್ವ ಯುವತಿಯ ಮೇಲೆ ಇಂತಹ ನಿಂದನೀಯ ಮಾತುಗಳನ್ನು ಆಡಿರುವುದು ಜನರಲ್ಲಿ ಆಕ್ರೋಶ ಹುಟ್ಟಿಸಿದೆ.
ಯುವತಿ ತನ್ನ ಪೋಸ್ಟ್‌ನಲ್ಲಿ ಬರೆದಿರುವಂತೆ, “ಆಟೋ ಚಾಲಕನ ವರ್ತನೆಯಿಂದ ನಾನು ಬೆಚ್ಚಿಬಿದ್ದೆ. ಆತನ ಫೋಟೋ ಅಥವಾ ಆಟೋ ನಂಬರ್ ನೋಟ್ ಮಾಡಲು ಸಹ ಆಗಲಿಲ್ಲ. ನೋಡಲು ಆತ ವಯಸ್ಸಾದ ವ್ಯಕ್ತಿ, ಬಿಳಿ ಕೂದಲು ಹೊಂದಿದ್ದ. ಮೊದಲ ನೋಟಕ್ಕೆ ಒಳ್ಳೆಯವನಂತೆ ಕಾಣಿಸಿದರೂ, ಇಂತಹ ವರ್ತನೆ ನನಗೆ ಭಯ ಹುಟ್ಟಿಸಿತು. ನನ್ನ ಗೆಳೆಯ ಜೊತೆಯಲ್ಲಿ ಇದ್ದುದರಿಂದ ಸಮಸ್ಯೆ ಆಗಲಿಲ್ಲ, ಆದರೆ ನಾನು ಒಬ್ಬಳೇ ಇದ್ದರೆ ಏನಾಗುತ್ತಿತ್ತೋ ಊಹಿಸಲು ಸಹ ಭಯವಾಗುತ್ತದೆ” ಎಂದು ಯುವತಿ ಹೇಳಿದ್ದಾರೆ.
ಈ ಘಟನೆಯಿಂದ ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಪ್ರಾರಂಭವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಮಹಿಳೆಯರ ವಿರುದ್ಧ ಇಂತಹ ಅಸಭ್ಯ ವರ್ತನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಆಟೋ ಚಾಲಕನ ಅಸಭ್ಯ ವರ್ತನೆ, ಸ್ಕರ್ಟ್ ಧರಿಸಿದ್ದಕ್ಕೆ ಯುವತಿಗೆ ಅತ್ಯಾಚಾರ ಬೆದರಿಕೆ!!!
By krutika naik
On: November 11, 2025 12:06 PM
---Advertisement---






