‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿತ್ತು. ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆಗೆ ಸಿದ್ಧರಾಗಿದ್ದ ಈ ಜೋಡಿ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿತ್ತು. ಆದರೆ ಕೆಲವು ಕಾಲದ ಬಳಿಕ ಇಬ್ಬರ ನಡುವೆ ಅಂತರ ಉಂಟಾಗಿ, ಸಂಬಂಧ ಮುರಿದುಬಿದ್ದಿತು.
ಇದನ್ನು ಓದಿ: ಟಾಕ್ಸಿಕ್’: ಹೊಸ ಅವತಾರದಲ್ಲಿ ರುಕ್ಮಿಣಿ ವಸಂತ್, ಪಾತ್ರದ ಕುರಿತು ಹೆಚ್ಚಿದ ಕುತೂಹಲ
ಅರ್ಜುನ್ ಜನ್ಯಾ ನಿರ್ದೇಶನದ ‘45’ ಸಿನಿಮಾದಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ, ಬಿಯಾಂಡ್ ಲಿಮಿಟ್ಸ್ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಹಲವು ಆಸಕ್ತಿದಾಯಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಶೆಟ್ಟಿ ಗ್ಯಾಂಗ್ನಲ್ಲಿ ಬಿರುಕು ಉಂಟಾಗಿದೆ ಎಂಬ ಮಾತುಗಳಿಗೂ ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ರಕ್ಷಿತ್–ರಶ್ಮಿಕಾ ಬ್ರೇಕಪ್ ವಿಚಾರದ ಬಗ್ಗೆ ಕೂಡ ಮಾತನಾಡಿದ್ದಾರೆ.
ಬ್ರೇಕಪ್ ವಿಷಯ ಈಗ ಮರೆತುಹೋಗಿರುವ ಅಧ್ಯಾಯ ಎಂದು ಪ್ರಮೋದ್ ಹೇಳಿದ್ದಾರೆ. ಆ ಸಂದರ್ಭದಿಂದ ಹೊರಬರಲು ರಕ್ಷಿತ್ಗೆ ಸ್ವಲ್ಪ ಸಮಯ ಬೇಕಾಯಿತು, ಆದರೆ ಅದನ್ನು ದಾಟಿದ ನಂತರ ಅವನು ಹಿಂದುಮುಂದು ನೋಡಲಿಲ್ಲ. ಇಂದಿನ ಜೀವನದಲ್ಲೇ ಸಂತೋಷವಾಗಿ ಬದುಕುತ್ತಿದ್ದಾನೆ. ರಶ್ಮಿಕಾ ವಿರುದ್ಧ ಯಾವತ್ತೂ ಆರೋಪ ಮಾಡಿಲ್ಲ, ಯಾವುದೇ ಸಂದರ್ಶನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ.
ಆರೋಪ ಮಾಡುವುದು ಸರಿಯಲ್ಲ ಎನ್ನುವ ನಿಲುವು ನಮ್ಮದೂ ಹೌದು ಎಂದು ಪ್ರಮೋದ್ ಹೇಳಿದ್ದಾರೆ. ಮಾತು ಮುಂದುವರೆಸಿದ ಅವರು, ಇಬ್ಬರೂ ಅಷ್ಟೇ ಚಿಕ್ಕ ವಯಸ್ಸಿನವರಾಗಿದ್ದರು, ಆ ಸಮಯದಲ್ಲಿ ಸ್ವಭಾವ ಮತ್ತು ಯೋಚನೆಗಳಲ್ಲಿ ಬದಲಾವಣೆ ಆಗುವುದು ಸಹಜ. ಅದಕ್ಕಾಗಿ ಒಬ್ಬರನ್ನೊಬ್ಬರು ದೋಷಾರೋಪಣೆ ಮಾಡಿಕೊಳ್ಳುವುದು ಅರ್ಥವಿಲ್ಲ.
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಹಂತದಲ್ಲಿ ಫೇಮ್ ಬರುತ್ತದೆ, ಅದು ವ್ಯಕ್ತಿಯನ್ನು ಬದಲಾಯಿಸಬಹುದು. ಆದರೆ ಯಾರ ಜೀವನವೂ ಇನ್ನೊಬ್ಬರಿಂದ ಸಂಪೂರ್ಣವಾಗಿ ನಿರ್ಮಾಣವಾಗುವುದಿಲ್ಲ, ಹಾಗೆಯೇ ಹಾಳಾಗುವುದೂ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ಸಾನ್ವಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದ್ದರು. ಆ ಚಿತ್ರದಲ್ಲಿ ರಕ್ಷಿತ್–ರಶ್ಮಿಕಾ ಜೋಡಿ ಪ್ರೇಕ್ಷಕರ ಮನ ಗೆದ್ದಿತ್ತು. ಶೂಟಿಂಗ್ ಸಮಯದಲ್ಲಿ ಆರಂಭವಾದ ಸ್ನೇಹ ಪ್ರೀತಿಯಾಗಿ ಬೆಳೆಯಿತು. 2017ರ ಜುಲೈ 3ರಂದು ವಿರಾಜ್ಪೇಟೆಯಲ್ಲಿ ಅದ್ಧೂರಿಯಾಗಿ ಅವರ ಎಂಗೇಜ್ಮೆಂಟ್ ನಡೆದಿತ್ತು. ನಂತರ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆದು, ‘ಗೀತಾ ಗೋವಿಂದಂ’ ಯಶಸ್ಸಿನ ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತು. ಅಧಿಕೃತವಾಗಿ ಏನನ್ನೂ ಹೇಳದಿದ್ದರೂ ನಿಶ್ಚಿತಾರ್ಥ ಮುರಿದುಬಿದ್ದಿತ್ತು.
ಇತ್ತೀಚೆಗೆ ‘ದಿ ಗರ್ಲ್ಫ್ರೆಂಡ್’ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದರು. ಟಾಕ್ಸಿಕ್ ಬಾಯ್ಫ್ರೆಂಡ್ನಿಂದ ನೋವು ಅನುಭವಿಸುವ ಯುವತಿಯ ಕಥೆ ಇದಾಗಿದ್ದು, ಅದು ತನ್ನ ನಿಜ ಜೀವನದ ಅನುಭವದಂತೆಯೇ ಇದೆ ಎಂಬ ರೀತಿಯಲ್ಲಿ ಅವರು ಮಾತನಾಡಿದ್ದರು. ಇದರಿಂದ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿಯ ಹೆಸರನ್ನು ಎಳೆದು ತಂದು ಚರ್ಚೆ ನಡೆಸಿದ್ದರು.
ಪ್ರಸ್ತುತ ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಟಾಲಿವುಡ್ನಲ್ಲಿ ಹರಿದಾಡುತ್ತಿವೆ. ಗುಟ್ಟಾಗಿ ನಿಶ್ಚಿತಾರ್ಥವಾಗಿದೆ, ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ವದಂತಿಯೂ ಇದೆ. ಆದರೆ ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ವದಂತಿಯನ್ನು ತಳ್ಳಿ ಹಾಕದ ಕಾರಣ, ಮದುವೆ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಶೀಘ್ರದಲ್ಲೇ ಎಲ್ಲ ಊಹಾಪೋಹಗಳಿಗೆ ತೆರೆ ಬೀಳಲಿದೆ ಎನ್ನಲಾಗುತ್ತಿದೆ.






