ಬೀದರ್: ಬೀದರ್ ತಾಲೂಕಿನ ಇಸ್ಲಾಂಪುರ ಸಮೀಪದ ಸೇತುವೆ ಕೆಳಭಾಗದಲ್ಲಿ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿರುವ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈ ಘಟನೆ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
ಮೃತನ ಕಾಲುಗಳನ್ನು ತಂತಿಯಿಂದ ಕಟ್ಟಿಹಾಕಲಾಗಿದ್ದು, ದುಷ್ಕರ್ಮಿಗಳು ರುಂಡ ಮತ್ತು ಮುಂಡವನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಮಾಹಿತಿ ಪಡೆದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಜನವಾಡ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತನಿಖೆ ಬಳಿಕ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






