---Advertisement---

ಹಾವೇರಿ: “ರಾಜಕಾರಣಿಗಳ ಒತ್ತಡದಿಂದ ಲಾಬಿ ಮಾಡಿ ಶಿಕ್ಷಕರು ಪ್ರಶಸ್ತಿ ಪಡೆದುಕೊಳ್ಳುತ್ತಿದ್ದಾರೆ” ಗಾಜೀಗೌಡ್ರ ಬೇಸರ

On: September 7, 2025 9:20 AM
Follow Us:
ಹಾವೇರಿ: "ರಾಜಕಾರಣಿಗಳ ಒತ್ತಡದಿಂದ ಲಾಬಿ ಮಾಡಿ ಶಿಕ್ಷಕರು ಪ್ರಶಸ್ತಿ ಪಡೆದುಕೊಳ್ಳುತ್ತಿದ್ದಾರೆ" ಗಾಜೀಗೌಡ್ರ ಬೇಸರ
---Advertisement---

“ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜದ ಪ್ರಮುಖ ವ್ಯಕ್ತಿಗಳಾಗಿ ರೂಪಿಸಿದ ಶಿಕ್ಷಕರು, ಯಾವುದೇ ಗೌರವ ಪಡೆಯದೆ ಬೇಸರದಿಂದ ನಿವೃತ್ತರಾಗುತ್ತಿದ್ದಾರೆ. ಕೆಲ ಶಿಕ್ಷಕರು, ಶಾಸಕರು ಮತ್ತು ರಾಜಕಾರಣಿಗಳ ಒತ್ತಡದಿಂದ ಲಾಬಿ ಮಾಡಿ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ” ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್. ಗಾಜೀಗೌಡ್ರ ಹೇಳಿದರು.

ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ಆಯೋಜಿಸಲಾದ ಸರ್ವೇಪಳ್ಳಿ ರಾಧಾಕೃಷ್ಣನ್ 137ನೇ ಜನ್ಮದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಭಾಗಿಯಾಗಿ ಮಾತು ಹೇಳಿದರು.

“ಶಿಕ್ಷಣ ಇಲಾಖೆಗೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರೆ ಅಧಿಕಾರಿಗಳಿದ್ದಾರೆ. ಜಿಲ್ಲೆಯ ಎಲ್ಲ ಶಾಲೆಗಳು ಹೇಗಿವೆ ? ಶಿಕ್ಷಕರು ಹೇಗಿದ್ದಾರೆ? ಎಂಬುದು ಅವರಿಗೆ ಗೊತ್ತಿರುತ್ತದೆ. ಹೀಗಿರುವಾಗ, ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಕರೆಯುವುದು ಸರಿಯಲ್ಲ. ಅರ್ಜಿ ಹಾಕಿ ಪ್ರಶಸ್ತಿ ಸಿಗುವುದಾದರೆ, ಆ ಪ್ರಶಸ್ತಿಗೆ ಗೌರವ ಸಿಗುವುದಿಲ್ಲ” ಎಂದರು.

“ಪ್ರಶಸ್ತಿ ಬಗ್ಗೆ ಹಲವು ಶಿಕ್ಷಕರು ಅಸಮಾಧಾನಗೊಂಡಿದ್ದಾರೆ. ನನಗೂ ಪತ್ರ ಬರೆದಿದ್ದಾರೆ. ಅರ್ಜಿ ಕರೆದು ಪ್ರಶಸ್ತಿ ನೀಡಲು ನಾಚಿಕೆಯಾಗಬೇಕು. ಅರ್ಜಿ ಹಾಕಿದ ಬಹುತೇಕ ಶಿಕ್ಷಕರು, ಶಾಸಕರು ಹಾಗೂ ರಾಜಕಾರಣಿಗಳ ವಸೂಲಿ ಹಚ್ಚುತ್ತಿದ್ದಾರೆ. ಲಂಚ ಕೊಟ್ಟು ಶಾಸಕರಿಂದ ಹೇಳಿಸಿ ಪ್ರಶಸ್ತಿ ಪಡೆಯುವುದು ಶಿಕ್ಷಣ ಕ್ಷೇತ್ರಕ್ಕೆ ಶೋಭೆಯಲ್ಲ. ಶ್ರೀಮಂತರಿಗೆ, ಶಾಸಕರ ಬೀಗರಿಗೆ ಪ್ರಶಸ್ತಿ ನೀಡುವುದೂ ಸರಿಯಲ್ಲ. ಮುಂದಿನ ವರ್ಷವಾದರೂ ಅರ್ಜಿ ಕರೆಯದೇ ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. ಶಿಕ್ಷಕರ ಬಗ್ಗೆ ಅಪಾರ ಗೌರವವಿದೆ. ಆದರೆ, ಈಗ ಶಿಕ್ಷಕರಿಂದಲೇ ಶಾಲೆಗಳು ಬಹಳಷ್ಟು ಹದಗೆಟ್ಟಿವೆ. ಶಿಕ್ಷಕರೆಂದರೆ, ದಿನವೂ ಓದಬೇಕು. ಏಕೆಂದರೆ, ಇಂದಿನ ಮಕ್ಕಳು ಶಿಕ್ಷಕರಿಗಿಂತ ಹೆಚ್ಚು ಜಾಣರಿದ್ದಾರೆ” ಎಂದರು.

“ನಾನೂ ಜಿ.ಪಂ. ಸದಸ್ಯನಿದ್ದಾಗ, ಸಂಸ್ಥೆ ಮೂಲಕ ಶಾಲೆ ಆರಂಭಿಸಿದೆ. ಅನುದಾನ ಪಡೆಯಲು ಸಾಕಷ್ಟು ವರ್ಷ ಬೇಕಾಯಿತು. ಅನುದಾನವೂ ಬೇಗ ಸಿಗಲಿಲ್ಲ. ಆಗ, ಶಿಕ್ಷಕರಿಗೆ ಕನ್ಯೆ ನೋಡಲು ನಾನೇ ಹೋಗಿದ್ದೆ. ನಮ್ಮ ಶಾಲೆಗೆ ಅನುದಾನ ಬರುತ್ತದೆ. ಶಿಕ್ಷಕರಿಗೆ ಕೈ ತುಂಬ ಸಂಬಳ ಸಿಗುವುದಾಗಿ ಹೇಳಿ, ಮದುವೆ ಮಾಡಿಸಿದೆ. ನಮ್ಮದು ಕನ್ನಡ ಶಾಲೆ. ಮಕ್ಕಳು ಬಡವರು. ಇಂಥ ಶಾಲೆಯನ್ನು ನಡೆಸಿಕೊಂಡು ಹೋಗುವುದರಲ್ಲಿ ಸಾಕಾಗಿದೆ. ಗೋವಿನ ಜೋಳ ಮಾರಿದ ಹಣವನ್ನೂ ಶಾಲೆಗೆ ಹಾಕಿದ್ದೇನೆ. ಇಂದಿನ ಶಿಕ್ಷಕರಿಂದ, ಕಲಿಕೆಯ ಜೊತೆಯಲ್ಲಿ ಬೇರೆ ಬೇರೆ ಕೆಲಸ ಮಾಡಿಸಲಾಗುತ್ತಿದೆ. ಚುನಾವಣೆ, ಹುಟ್ಟಿದವರು-ಸತ್ತವರ ದಾಖಲಾತಿ, ತತ್ತಿ, ಬಾಳೆಹಣ್ಣು, ಬಿಸಯೂಟ ಎಲ್ಲದ್ದಕ್ಕೂ ಶಿಕ್ಷಕರನ್ನ ಬಳಸಿಕೊಳ್ಳಲಾಗುತ್ತಿದೆ. ಶಿಕ್ಷಕರ ಕೊರೆತೆಯೂ ಬಹಳಷ್ಟು ಕಾಡುತ್ತಿದೆ” ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಲ್. ನಾಗರಾಜ್ ಮಾತನಾಡಿ, “ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ತೊಡಗಬೇಕು. ಶಿಕ್ಷಕರ ಕಲಿಕಾ ಮಟ್ಟದ ಮೇಲೆ ವಿದ್ಯಾರ್ಥಿಗಳ ಕಲಿಕೆ ಅವಲಂಬಿತವಾಗಿರುತ್ತದೆ. ಶಿಕ್ಷಕರು ಸಮಯ ಪಾಲನೆ ಮಾಡಬೇಕು. ಇಂದಿನ ಮಕ್ಕಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಮೌಲ್ಯ ಆಧರಿತ ಶಿಕ್ಷಣದ ಅವಶ್ಯಕತೆ ಇದೆ” ಎಂದರು.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರಾಗಿ 23 ಮಂದಿ ಶಿಕ್ಷಕರಿಗೆ 2025-26ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಅವರಿಗೆ ಸನ್ಮಾನ ನೀಡಲಾಯಿತು. ಈ ಸಮಾರಂಭದಲ್ಲಿ ಶ್ರೀಶೈಲ ಶಾಖಾಮಠ ಹರಸೂರ ಬಣ್ಣದಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅಧ್ಯಕ್ಷರಾಗಿ ಉಪಸ್ಥಿತರಿದ್ದರು.

ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ, ಡಯಟ್ ಉಪನಿರ್ದೇಶಕ ಜೆಡ್.ಎಂ. ಖಾಜಿ ಇದ್ದರು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment