ಬೆಂಗಳೂರಲ್ಲಿ ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಸ್ಕೂಲ್ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ತಂದೆ ದಾವೆ ಹೂಡಿದ್ದಾರೆ. ದೇವನಹಳ್ಳಿಯ ಖಾಸಗಿ ಶಾಲೆಯಲ್ಲಿ ರಾಷ್ಟ್ರಗೀತೆ ಕಡೆಗಣನೆ, ದಸರಾ ರಜೆ ವಿಸ್ತರಣೆ ಸೇರಿದಂತೆ ಕೆಲವು ಅಹಿತಕರ ಸಂಗತಿಗಳು ನಡೆಯುತ್ತಿವೆ ಎಂದು ಆರೋಪಿಸಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹೈಕೋರ್ಟ್ ಕದತಟ್ಟಿದ್ದಾರೆ.
ದೇವನಹಳ್ಳಿ ಮೂಲದ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 10 ಮತ್ತು 12ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರೋ ಇಬ್ಬರು ವಿದ್ಯಾರ್ಥಿಗಳ ಪರವಾಗಿ ಅವರ ತಂದೆ ಸಹಕಾರ ನಗರದ ಅನಿಲ್ ಪಿ. ಮೆಣಸಿನಕಾಯಿ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿದೆ.
ವಾದ ಆಲಿಸಿದ ನ್ಯಾಯಮೂರ್ತಿಗಳು ಶಾಲೆಯ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ.
ತಂದೆಯೇ ಮಕ್ಕಳ ವಿಚಾರದಲ್ಲಿ ಕೆಟ್ಟ ಸಂಪ್ರದಾಯ ಹಾಕಿಕೊಡುತ್ತಿದ್ದಾರೆ. ತಮ್ಮ ಇಚ್ಛೆಯಂತೆ ಶಾಲೆ ನಡೆಯಬೇಕೆಂದರೆ ಹೇಗೆ? ಎಂದು ವಕೀಲರು ಪ್ರಶ್ನಿಸಿದ್ದಾರೆ. ಇಷ್ಟವಿಲ್ಲದಿದ್ದರೆ ಬೇರೆ ಶಾಲೆಗೆ ಹೋಗಲಿ. ಪೋಷಕರಿಗೆ ಇದೆಲ್ಲ ಗೊತ್ತಿದ್ದೂ ಈ ರೀತಿ ಮಾಡುತ್ತಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಅರ್ಜಿದಾರರ ಪರ ವಾದಿಸಿದ ವಕೀಲರು ನ್ಯಾಯಾಲಯದ ಭಾವನೆ ಅರ್ಥವಾಗುತ್ತದೆ. ಆದರೆ, ವಿಷಯವೂ ಗಂಭೀರವಾಗಿದೆ. ವಿದ್ಯಾರ್ಥಿಗಳು ಆಕ್ಷೇಪ ಎತ್ತಿದ ಮೇಲೆ ರಾಷ್ಟ್ರಗೀತೆ ಕಡ್ಡಾಯಗೊಳಿಸಲಾಗಿದೆ. ದಸರಾ ರಜೆ ದಿನಗಳನ್ನು ಹೆಚ್ಚಿಸಲಾಯಿತು. ಇನ್ನೂ ಹಲವು ಅನುಚಿತ ಮತ್ತು ಅಹಿತಕರ ಸಂಗತಿಗಳು ನಡೆದಿವೆ. ಶಾಲೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಅದೇಶಿಸುವಂತೆ ಕೋರಿದರು.






