ನಗರದ ಹೊರವಲಯದ ರೈತರ ಜಮೀನಿನಲ್ಲಿ ಕಡಲೆಕಾಯಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ರೈತರು ಸಾರ್ವಜನಿಕವಾಗಿ ಶಿಕ್ಷೆ ನೀಡಿದ ಘಟನೆ ಗದಗ ನಗರ ಹೊರವಲಯದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಗದಗದ ಸರ್ವಜ್ಞ ಸರ್ಕಲ್ ಸಮೀಪ ಈ ಘಟನೆ ನಡೆದಿದ್ದು, ವಾಯುವಿಹಾರಕ್ಕೆ ಬಂದಿದ್ದ ಜನರ ಕಣ್ಣಿಗೆ ಕಳ್ಳತನದ ಕೃತ್ಯ ಬಿದ್ದಿದೆ.
ಇದನ್ನು ಓದಿ: ಹಾಸಿಗೆಯಲ್ಲಿ ಮೂತ್ರ ಮಾಡಿದ ಕಾರಣಕ್ಕೆ 5 ವರ್ಷದ ಬಾಲಕಿ ಗುಪ್ತಾಂಗ ಸುಟ್ಟ ಮಲತಾಯಿ…!
ಪೊಲೀಸರು ಹಾಗೂ ಸ್ಥಳೀಯರಿಂದ ದೊರೆತ ಮಾಹಿತಿಯಂತೆ, ಬೆಳಿಗ್ಗೆ ರೈತರ ಜಮೀನಿಗೆ ನುಗ್ಗಿದ ಕಳ್ಳನು ಕಡಲೆ ಗಿಡಗಳನ್ನು ಕಿತ್ತು, ಎರಡು ಚೀಲದಷ್ಟು ಕಡಲೆಕಾಯಿ ಗಿಡಗಳನ್ನು ದೊಡ್ಡ ಚೀಲದಲ್ಲಿ ತುಂಬಿಕೊಂಡು ಹೊರಟಿದ್ದಾನೆ. ಈ ದೃಶ್ಯ ಗಮನಿಸಿದ ವಾಯುವಿಹಾರಿಗಳು ಅನುಮಾನಗೊಂಡು ತಕ್ಷಣವೇ ಜಮೀನಿನ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ರೈತರು ಸ್ಥಳಕ್ಕೆ ಧಾವಿಸಿ ಕಳ್ಳನನ್ನು ಹಿಡಿದು ಪ್ರಶ್ನಿಸಿ ಧರ್ಮದೇಟು ನೀಡಿದ್ದಾರೆ. ನಂತರ ಆತನಿಗೆ ಕಡಲೆಕಾಯಿ ಹಾರ ಹಾಕಿ ಸರ್ವಜ್ಞ ಸರ್ಕಲ್ ಸಮೀಪದ ಕಂಬಕ್ಕೆ ಕಟ್ಟಿಹಾಕಿ ಸಾರ್ವಜನಿಕವಾಗಿ ಶಾಸ್ತಿ ನೀಡಲಾಗಿದೆ. ಈ ದೃಶ್ಯವನ್ನು ನೋಡಲು ಸ್ಥಳದಲ್ಲಿ ಜನಸಂದಣಿ ಸೇರಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಘಟನೆ ಬಗ್ಗೆ ರೈತರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, ಕುಡಿಯಲು ಹಣ ಇಲ್ಲದ ಕಾರಣ ಕಳ್ಳತನಕ್ಕೆ ಕೈ ಹಾಕಿದ್ದೇನೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.
ಬಂಧಿತನನ್ನು ಚಿದಾನಂದ ಎಂದು ಗುರುತಿಸಲಾಗಿದ್ದು, ಆತ ಗಂಗಾವತಿಯಿಂದ ರೈಲ್ವೆ ಮೂಲಕ ಗದಗಕ್ಕೆ ಬಂದು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ರೈತರ ಶ್ರಮದ ಬೆಳೆ ಕಳ್ಳತನಕ್ಕೆ ಸ್ಥಳೀಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಆಗ್ರಹಿಸಿದ್ದಾರೆ. ಈ ಘಟನೆ ಗದಗ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರೈತರ ಬೆಳೆ ರಕ್ಷಣೆಗೆ ಹೆಚ್ಚುವರಿ ಭದ್ರತೆ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.






