ಬೆಂಗಳೂರು: ಜೀವನ ಯಾವಾಗ ಹೇಗೆ ತಿರುವು ಪಡೆಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಕೋವಿಡ್-19 ಮಹಾಮಾರಿಯು ಅನೇಕರ ಬದುಕನ್ನೇ ತಲೆಕೆಳಗಾಗಿಸಿದ್ದು, ಯಶಸ್ವಿಯಾಗಿ ಸಾಗುತ್ತಿದ್ದ ಉದ್ಯಮಗಳನ್ನೂ ನೆಲಕಚ್ಚುವಂತೆ ಮಾಡಿದೆ. ಇದೀಗ ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರನಾಗಿ ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಿಯಾಗಿದ್ದ ವ್ಯಕ್ತಿಯೊಬ್ಬರು, ಬದುಕಿಗಾಗಿ ರ್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕರಾಗಿರುವ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರ್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದ ಚಿರಾಗ್ (Chiraag) ಎಂಬವರು, ಪ್ರಯಾಣದ ವೇಳೆ ಚಾಲಕನೊಂದಿಗೆ ಮಾತನಾಡಿದಾಗ ಆತನ ಬದುಕಿನ ನಿಜವಾದ ಕಥೆ ಹೊರಬಂದಿದೆ. ಈ ಅನುಭವವನ್ನು ಚಿರಾಗ್ ತಮ್ಮ ‘ಎಕ್ಸ್’ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿದೆ.
ಚಾಲಕನಾಗಿರುವ ಈ ವ್ಯಕ್ತಿ ಅಮಿಟಿ ವಿಶ್ವವಿದ್ಯಾಲಯದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಪದವಿ ಪಡೆದಿದ್ದು, ಬಳಿಕ ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ಉದ್ಯಮ ಆರಂಭಿಸಿದ್ದರು. ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕುಟುಂಬವು ಉದ್ಯಮದಲ್ಲಿ ತೊಡಗಿಸಿಕೊಂಡಿತ್ತು. ಜೀವನ ಸುಗಮವಾಗಿ ಸಾಗುತ್ತಿತ್ತು. ಆದರೆ ಕೋವಿಡ್-19 ಮಹಾಮಾರಿ ಈ ಎಲ್ಲವನ್ನೂ ಅಲ್ಲೋಲ-ಕಲ್ಲೋಲ ಮಾಡಿತು.
ಲಾಕ್ಡೌನ್ ಮತ್ತು ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದು, ಕಾರ್ಮಿಕರ ಸಂಬಳ, ಬ್ಯಾಂಕ್ ಸಾಲ ಸೇರಿದಂತೆ ಒಟ್ಟು ಸುಮಾರು 13 ರಿಂದ 14 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಆ ವ್ಯಕ್ತಿ ಚಿರಾಗ್ಗೆ ತಿಳಿಸಿದ್ದಾರೆ. ಉದ್ಯಮ ಸಂಪೂರ್ಣವಾಗಿ ಕುಸಿದ ಬಳಿಕ, ಜೀವನ ಸಾಗಿಸಲು ರ್ಯಾಪಿಡೋ ಚಾಲಕರಾಗಿ ಕೆಲಸ ಆರಂಭಿಸಿದ್ದಾರೆ.
ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸ್ಪಂದನೆ ಪಡೆದುಕೊಂಡಿದ್ದು, ಅನೇಕರು ಕೋವಿಡ್ ಕಾಲದ ಸಂಕಷ್ಟವನ್ನು ನೆನೆದು ಭಾವುಕರಾಗಿದ್ದಾರೆ. “ಸಮಯ ಯಾರನ್ನಾದರೂ ಬದಲಿಸಬಹುದು, ಆದರೆ ಹೋರಾಟ ಬಿಡಬಾರದು” ಎಂಬ ಸಂದೇಶವನ್ನು ಈ ಕಥೆ ಸಾರುತ್ತಿದೆ.






