ಹಾಸನ: ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ಪಾವತಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ, ಹಾಸನ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಕೋರ್ಟ್ ಆದೇಶದಂತೆ, ವಕೀಲರೊಂದಿಗೆ ಆಗಮಿಸಿದ ರೈತರು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿಯವರ ಕಾರನ್ನು ಜಪ್ತಿ ಮಾಡಿದರು.
ಇದನ್ನು ಓದಿ: HMT ವಾಚ್ ಕಂಪನಿಯ ಅಧಿಕೃತವಾಗಿ ಸಂಪೂರ್ಣ ಬಂದ್..!
ಯಗಚಿ ನಾಲೆ ಯೋಜನೆಗಾಗಿ ಸುಮಾರು 15 ವರ್ಷಗಳ ಹಿಂದೆ, ಆಲೂರು ತಾಲ್ಲೂಕಿನ ಭಕ್ತರವಳ್ಳಿ ಗ್ರಾಮದ ರೈತ ಮರೀಗೌಡ ಅವರಿಗೆ ಸೇರಿದ್ದ ಸರ್ವೆ ನಂ. 44/1ರಲ್ಲಿ 10.5 ಗುಂಟೆ ಜಮೀನುನ್ನು ನೀರಾವರಿ ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿಗೆ ₹11,22,559 ಪರಿಹಾರ ನೀಡಬೇಕಾಗಿದ್ದರೂ, ಇಷ್ಟುವರೆಗೂ ಪಾವತಿ ಮಾಡದ ಹಿನ್ನೆಲೆ ರೈತ ಮರೀಗೌಡ ಹಾಗೂ ಅವರ ಮಕ್ಕಳು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯದ ಆದೇಶದಂತೆ, ಮಧ್ಯಾಹ್ನ ವಕೀಲ ಮಂಜುನಾಥ್ ಅವರೊಂದಿಗೆ ಆಗಮಿಸಿದ ರೈತರು ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದರು.
ಘಟನೆಯ ವೇಳೆ, ಜಿಲ್ಲಾಧಿಕಾರಿಗಳ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಬಿ.ಎ. ಸ್ಥಳಕ್ಕೆ ಆಗಮಿಸಿ, ಸಂಜೆಯೊಳಗೆ ಪರಿಹಾರ ಪಾವತಿಸಲಾಗುವುದು, ಸ್ವಲ್ಪ ಸಮಯ ನೀಡಿ ಎಂದು ಮನವಿ ಮಾಡಿದರು. ಆದರೆ, ಈ ಮನವಿಗೆ ಸ್ಪಂದಿಸದ ರೈತರು ಹಾಗೂ ಮರೀಗೌಡ ಅವರ ಪುತ್ರರು ಕಾರನ್ನು ಎಳೆದೊಯ್ಯಲು ವಾಹನ ತರಿಸಿದರು.
ಆದರೆ, ಇನ್ನೋವಾ ಕಾರನ್ನು ಎಳೆದೊಯ್ಯುವುದರಿಂದ ವಾಹನಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಚಾಲಕರು ವಾಹನವನ್ನು ವಾಪಸ್ ಕರೆದೊಯ್ದರು. ಇದರಿಂದಾಗಿ, ರೈತರು ಜಪ್ತಿ ಮಾಡಿರುವ ಕಾರಿನ ಬಳಿಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.






