ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ನಕಲಿ ನರ್ಸ್ ಹುಚ್ಚಾಟ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ನರ್ಸಿಂಗ್ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದ ಕಾರವಾರ ಮೂಲದ ಸನಾ ಶೇಖ್ ಎಂಬಾಕೆ, ಕಳೆದ ಎರಡು ಮೂರು ತಿಂಗಳಿನಿಂದಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿಯ ಕುಮಾರಸ್ವಾಮಿ ಲೇಔಟ್ನಲ್ಲಿ ವಾಸಿಸುತ್ತಿದ್ದ ಕಾರವಾರ ಮೂಲದ ಸನಾ, ನರ್ಸಿಂಗ್ ವಿದ್ಯಾರ್ಥಿನಿ ವೇಷ ತಾಳಿ ಬೀಮ್ಸ್ ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಸಂಚರಿಸುತ್ತಿದ್ದಾಳೆ. ಸರ್ಜಿಕಲ್ ವಾರ್ಡ್, ಓಪಿಡಿ ಸೇರಿ ಆಸ್ಪತ್ರೆಯ ಹಲವು ವಿಭಾಗಗಳಲ್ಲಿ ಓಡಾಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಕೆಯ ವರ್ತನೆ ಬಗ್ಗೆ ಸಿಬ್ಬಂದಿಗೆ ಅನುಮಾನ ವ್ಯಕ್ತವಾಯಿತು.
ವಿಚಾರಣೆ ನಡೆಸಿದಾಗ, ತಾನು ಬೀಮ್ಸ್ ನಿರ್ದೇಶಕರ ಪರಿಚಯ ಹೊಂದಿದ್ದೇನೆ ಎಂದು ಹೇಳಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾಳೆ. ನರ್ಸ್ ವಿದ್ಯಾರ್ಥಿನಿ ಹೆಸರಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ಆಕೆಯ ಹುಚ್ಚಾಟ ಕೊನೆಗೂ ಬಯಲಿಗೆ ಬಂದಿದೆ.
ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಸೆಕ್ಯೂರಿಟಿ ಸಿಬ್ಬಂದಿಗೆ ಸಿಕ್ಕಿಬಿದ್ದ ನಕಲಿ ನರ್ಸ್ನ್ನು ತಕ್ಷಣವೇ ಬೀಮ್ಸ್ ಆಸ್ಪತ್ರೆಯ ಸರ್ಜನ್ ಮತ್ತು ಆರ್ಎಂಓ ಅವರ ಗಮನಕ್ಕೆ ತಂದಿದ್ದಾರೆ. ವಿಚಾರಣೆ ವೇಳೆ ಆಕೆ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಸಹ ಪ್ರ್ಯಾಕ್ಟೀಸ್ ಮಾಡುತ್ತಿದ್ದಾಳೆ ಎಂಬುದು ಗೊತ್ತಾಗಿದೆ. ಆಸ್ಪತ್ರೆಯ ಒಂದು ವಿಭಾಗದ ಮುಖ್ಯಸ್ಥರ ಸಹಕಾರದಿಂದ ಇಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾಳೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬೀಮ್ಸ್ ಆಡಳಿತ ಮಂಡಳಿ ನಿರಾಕರಿಸಿದೆ.






