ಮುಖ ಮತ್ತು ಹುಬ್ಬುಗಳ ಮೇಲೆ ಬೆಳೆಯುವ ಅನಗತ್ಯ ಕೂದಲನ್ನು ತೆಗೆದುಹಾಕಲು ಥ್ರೆಡ್ಡಿಂಗ್ ಸಾಮಾನ್ಯವಾಗಿ ಬಳಸಲಾಗುವ ವಿಧಾನ. ಹೆಚ್ಚಿನ ಮಹಿಳೆಯರು ಹುಬ್ಬುಗಳಿಗೆ ಶೇಪ್ ಕೊಡಿಸಲು ನಿಯಮಿತವಾಗಿ ಪಾರ್ಲರ್ಗಳಿಗೆ ಹೋಗುತ್ತಾರೆ. ಆದರೆ ಈ ವೇಳೆ ಆಗುವ ಸಣ್ಣ ಅಜಾಗರೂಕತೆ ಕೂಡ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂಬುದು ನಿಮಗೆ ಗೊತ್ತೇ?
ಈ ಕುರಿತು ವೈದ್ಯರು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಒಂದು ಆತಂಕಕಾರಿ ಪ್ರಕರಣವನ್ನು ಹಂಚಿಕೊಂಡಿದ್ದಾರೆ. ಆ ಘಟನೆಯ ವಿವರಗಳು ಹಲವರಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಇದನ್ನು ಓದಿ : ಅಧಿಕಾರ ಬಂದರೂ ಮಣ್ಣಿನ ಗುಣ ಮರೆತಿಲ್ಲ: ಖಾನಾಪುರ ಶಾಸಕ ವಿಠ್ಠಲ ಹಲಗೆಕರ್ ಅವರ ಪ್ರೇರಣಾದಾಯಕ ಬದುಕು
ವೈದ್ಯರು ಹೇಳುವುದೇನು?
ಕೆಲವು ದಿನಗಳ ಹಿಂದೆ 28 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದರು ಎಂದು ವೈದ್ಯರು ತಿಳಿಸಿದ್ದಾರೆ. ಅವರು ತೀವ್ರ ಆಯಾಸ, ವಾಕರಿಕೆ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿರುವ ಬಗ್ಗೆ ದೂರಿದರು. ಪರೀಕ್ಷೆ ನಡೆಸಿದಾಗ ಅವರಿಗೆ ಲಿವರ್ ಫೇಲ್ಯೂರ್ ಆಗಿರುವುದು ದೃಢಪಟ್ಟಿತು. ಆಶ್ಚರ್ಯಕರ ಸಂಗತಿಯೆಂದರೆ, ಅವರಿಗೆ ಮದ್ಯಪಾನ ಮಾಡುವ ಅಭ್ಯಾಸ ಇರಲಿಲ್ಲ ಮತ್ತು ಲಿವರ್ಗೆ ಹಾನಿ ಮಾಡುವ ಯಾವುದೇ ಔಷಧಿಗಳನ್ನೂ ಅವರು ಸೇವಿಸುತ್ತಿರಲಿಲ್ಲ. ತನಿಖೆಯ ಬಳಿಕ ನಿಜವಾದ ಕಾರಣ ಬ್ಯೂಟಿ ಪಾರ್ಲರ್ನಲ್ಲಿ ಮಾಡಿಸಿಕೊಂಡ ಐಬ್ರೋ ಥ್ರೆಡ್ಡಿಂಗ್ ಆಗಿತ್ತು.
ಥ್ರೆಡ್ಡಿಂಗ್ ಲಿವರ್ಗೆ ಹೇಗೆ ಹಾನಿ ಮಾಡುತ್ತದೆ?
ಅನೇಕ ಪಾರ್ಲರ್ಗಳಲ್ಲಿ ಹಳೆಯ ಹಾಗೂ ಸ್ವಚ್ಛವಲ್ಲದ ದಾರಗಳನ್ನು ಮರುಬಳಕೆ ಮಾಡಲಾಗುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಥ್ರೆಡ್ಡಿಂಗ್ ವೇಳೆ ಚರ್ಮದ ಮೇಲೆ ಅತಿಸಣ್ಣ ಕಡಿತಗಳು ಅಥವಾ ಮೈಕ್ರೋ-ಕಟ್ಗಳು ಉಂಟಾಗುತ್ತವೆ. ಈ ದಾರವನ್ನು ಮೊದಲು ಸೋಂಕಿತ ವ್ಯಕ್ತಿಯ ಮೇಲೆ ಬಳಸಿದ್ದರೆ, ಅವರ ರಕ್ತದಲ್ಲಿರುವ ವೈರಸ್ಗಳು ಮುಂದಿನ ವ್ಯಕ್ತಿಯ ದೇಹಕ್ಕೆ ಪ್ರವೇಶಿಸಬಹುದು. ಇದರಿಂದ ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಮತ್ತು ಎಚ್ಐವಿ ಮುಂತಾದ ಗಂಭೀರ ಸೋಂಕುಗಳು ಹರಡುವ ಸಾಧ್ಯತೆ ಇದೆ. ಈ ರೋಗಗಳ ಲಕ್ಷಣಗಳು ತಕ್ಷಣ ಕಾಣಿಸಿಕೊಳ್ಳದೇ, ವಾರಗಳ ನಂತರ ಗೋಚರಿಸಬಹುದು. ಆ ವೇಳೆಗೆ ದೇಹಕ್ಕೆ ಈಗಾಗಲೇ ದೊಡ್ಡ ಹಾನಿ ಸಂಭವಿಸಿರುತ್ತದೆ.
ಪಾರ್ಲರ್ಗೆ ಹೋದಾಗ ಗಮನಿಸಬೇಕಾದ ವಿಷಯಗಳು
• ಥ್ರೆಡ್ಡಿಂಗ್ಗೆ ಯಾವಾಗಲೂ ಹೊಸ ಹಾಗೂ ಸ್ವಚ್ಛ ದಾರವನ್ನೇ ಬಳಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಇದಕ್ಕೆ ಒಪ್ಪದ ಪಾರ್ಲರ್ಗಳನ್ನು ತಪ್ಪಿಸುವುದು ಉತ್ತಮ.
• ಥ್ರೆಡ್ಡಿಂಗ್ ಬಳಿಕ ನಿರಂತರ ಆಯಾಸ, ದೌರ್ಬಲ್ಯ, ವಾಕರಿಕೆ ಅಥವಾ ಕಣ್ಣು/ಚರ್ಮ ಹಳದಿ ಬಣ್ಣಕ್ಕೆ ತಿರುಗಿದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.
• ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ. ಸ್ವಲ್ಪ ಎಚ್ಚರಿಕೆ ವಹಿಸುವುದರಿಂದಲೇ ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು. ಆದ್ದರಿಂದ ಸುರಕ್ಷಿತ ಪಾರ್ಲರ್ ಆಯ್ಕೆ ಮಾಡಿ ಮತ್ತು ಸ್ವಚ್ಛತೆಯ ಬಗ್ಗೆ ಪ್ರಶ್ನಿಸಲು ಹಿಂಜರಿಯಬೇಡಿ






