ಸೋಮವಾರ ಸಂಜೆ ಸುಮಾರು 6.52ಕ್ಕೆ ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ಬಳಿ ಭೀಕರ ಕಾರು ಸ್ಫೋಟ ಸಂಭವಿಸಿದೆ. ಬಿಳಿ ಬಣ್ಣದ ಐ20 ಕಾರಿನಲ್ಲಿ ನಡೆದ ಈ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಪಾರ್ಕಿಂಗ್ ಪ್ರದೇಶದ ಹಲವಾರು ವಾಹನಗಳು ಹಾನಿಗೊಂಡಿವೆ.
ಘಟನೆಯ ಕೆಲವೇ ನಿಮಿಷಗಳ ನಂತರ ಸಿಸಿಟಿವಿ ದೃಶ್ಯಾವಳಿ ಹೊರಬಂದಿದ್ದು, ಅದರಲ್ಲಿ ಕಾರು ಪಾರ್ಕಿಂಗ್ ಪ್ರದೇಶದಿಂದ ಹೊರಬರುತ್ತಿರುವುದು ಕಾಣುತ್ತದೆ. ಆ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಫರಿದಾಬಾದ್ ಮೂಲದ ಭಯೋತ್ಪಾದಕ ಸಂಘಟನೆಯ ಸದಸ್ಯ ಡಾ. ಮೊಹಮ್ಮದ್ ಉಮರ್ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಪ್ಪು ಮುಖವಾಡ ತೊಟ್ಟ ವ್ಯಕ್ತಿಯೊಬ್ಬನು ಕಾರಿನೊಳಗೆ ಕುಳಿತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪೊಲೀಸ್ ಮೂಲಗಳ ಪ್ರಕಾರ, ಆತನೇ ಉಮರ್ ಆಗಿರುವ ಸಾಧ್ಯತೆ ಹೆಚ್ಚಿದೆ. ಮಧ್ಯಾಹ್ನ 3.19ರಿಂದ ಸಂಜೆ 6.48ರವರೆಗೆ ಕಾರು ಪಾರ್ಕಿಂಗ್ ಪ್ರದೇಶದಲ್ಲಿಯೇ ನಿಂತಿತ್ತು. ಈ ಅವಧಿಯಲ್ಲಿ ಕಾರಿನೊಳಗಿದ್ದ ಉಮರ್ ಯಾರನ್ನಾದರೂ ಕಾಯುತ್ತಿದ್ದನಾ ಅಥವಾ ದಾಳಿಗೆ ತಯಾರಿ ನಡೆಸುತ್ತಿದ್ದನಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಸ್ಫೋಟವು ಫರಿದಾಬಾದ್ ಭಯೋತ್ಪಾದಕ ಗುಂಪಿನ ಚಟುವಟಿಕೆಗಳೊಂದಿಗೆ ನಂಟು ಹೊಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್ ಹಾಗೂ ಲಕ್ನೋ ಪ್ರದೇಶಗಳಲ್ಲಿ ನಡೆಸಿದ ದಾಳಿಗಳಲ್ಲಿ ಸುಮಾರು 2900 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ ಡಾ. ಮುಜಮ್ಮಿಲ್ ಶಕೀಲ್ ಹಾಗೂ ಮಹಿಳಾ ವೈದ್ಯೆ ಶಾಹೀನ್ ಶಾಹಿದ್ ಬಂಧಿತರಾಗಿದ್ದರು. ಅವರ ಬಂಧನದ ನಂತರ ಈ ದಾಳಿ ತುರ್ತು ಕ್ರಮವಾಗಿ ನಡೆದಿರಬಹುದು ಎಂದು ಭದ್ರತಾ ಮೂಲಗಳು ಹೇಳಿವೆ.
ದೆಹಲಿ ಪೊಲೀಸರು ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದಿಂದ ಆರ್‌ಡಿಎಕ್ಸ್‌ನ ಯಾವುದೇ ಸುಳಿವುಗಳು ಸಿಕ್ಕಿಲ್ಲದಿದ್ದರೂ, ಆತ್ಮಹತ್ಯಾ ದಾಳಿಯ ಸಾಧ್ಯತೆಗಳನ್ನು ತಳ್ಳಿ ಹಾಕಲಾಗಿಲ್ಲ. ಪಹರ್‌ಗಂಜ್, ದರಿಯಾಗಂಜ್ ಹಾಗೂ ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.
ಸ್ಫೋಟದ ನಂತರ ಜನರಲ್ಲಿ ಭೀತಿ ಉಂಟಾಯಿತು. ಸಿಸಿಟಿವಿ ದೃಶ್ಯಗಳಲ್ಲಿ ಜನರು ಭಯಭೀತರಾಗಿ ಸ್ಥಳದಿಂದ ಓಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಭದ್ರತಾ ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.
ಸ್ಫೋಟದ ಹಿನ್ನೆಲೆ ದೆಹಲಿಯಲ್ಲಷ್ಟೇ ಅಲ್ಲ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಮೆರಿಕಾ, ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ತಮ್ಮ ನಾಗರಿಕರಿಗೆ ಕೆಂಪುಕೋಟೆ ಮತ್ತು ಜನಸಂಚಾರ ಪ್ರದೇಶಗಳಿಂದ ದೂರವಿರಲು ಎಚ್ಚರಿಕೆ ನೀಡಿವೆ.
ಇದರ ನಡುವೆಯೇ ಅಧಿಕಾರಿಗಳು ಶಂಕಿತ ಉಗ್ರ ಡಾ. ಉಮರ್ ಅವರ ಕುಟುಂಬದವರನ್ನೂ ವಶಕ್ಕೆ ಪಡೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ವಾಸಿಸುತ್ತಿದ್ದ ಉಮರ್ ಅವರ ತಾಯಿ ಹಾಗೂ ಸಹೋದರನನ್ನು ಪೊಲೀಸರು ವಿಚಾರಣೆಗಾಗಿ ಬಂಧಿಸಿದ್ದಾರೆ. ಘಟನೆಯ ನಿಜಸ್ವರೂಪವನ್ನು ಪತ್ತೆಹಚ್ಚಲು ರಾಷ್ಟ್ರ ಮಟ್ಟದ ತನಿಖಾ ಸಂಸ್ಥೆಗಳು ಈಗ ಸಜ್ಜಾಗಿವೆ.
ದೆಹಲಿ ಬಾಂಬ್ ಸ್ಫೋಟದ ಆರೋಪಿ ಪತ್ತೆ! ಅಮಾಯಕರ ಪ್ರಾಣ ತೆತ್ತ ಈ ರಾಕ್ಷಸ ಯಾರು ಗೊತ್ತಾ?
By krutika naik
On: November 11, 2025 12:45 PM
---Advertisement---






