ಆನ್ಲೈನ್ ಅಪ್ಲಿಕೇಶನ್ನಲ್ಲಿ ವೃದ್ಧ ಮಹಿಳೆಯೊಬ್ಬರು ಹಾಲು ಕರಿದಿಸಲು ಹೋಗಿ ಮೋಸ ಹೋಗಿದ್ದಾರೆ. ಮುಂಬೈನ ಮಹಿಳೆಯೊಬ್ಬರು ಒಂದು ಲೀಟರ್ ಹಾಲನ್ನು ಆರ್ಡರ್ ಮಾಡಲು ಹೋಗಿ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿ ನಂತರ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಅವರು ತಮ್ಮ ಜೀವಮಾನದ 18.5 ಲಕ್ಷ ರೂಪಾಯಿ ಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ.
ಮುಂಬೈ ನಗರದ ವಡಾಲಾ ನೆರೆಹೊರೆಯಲ್ಲಿ ವಾಸಿಸುವ 71 ವರ್ಷದ ಮಹಿಳೆಗೆ ಆಗಸ್ಟ್ 4 ರಂದು ಹಾಲಿನ ಕಂಪನಿಯ ಕಾರ್ಯನಿರ್ವಾಹಕ ದೀಪಕ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿ ಒಂದು ಲಿಂಕ್ ಕಳುಹಿಸಿ, ಆರ್ಡರ್ ನೀಡಲು ವೈಯಕ್ತಿಕ ವಿವರಗಳನ್ನು ಅದರಲ್ಲಿ ನಮೂದಿಸುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆ ಮತ್ತು ವಂಚಕನ ನಡುವೆ ಸುಮಾರು ಒಂದು ಗಂಟೆ ಕಾಲ ಸಂಬಾಷಣೆ ನಡೆದಿದ್ದು, ಆತ ಹೇಳಿದ ನಿರ್ದೇಶನಗಳನ್ನು ವಯೋವೃದ್ಧೆ ಅನುಸರಿಸಿದ್ದಾರೆ ಎಂದು ತಿಳಿದು ಬಂದಿದೆ. ಮರುದಿನ ಕರೆ ಮಾಡಿ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಂಡಿದ್ದಾನೆ ಎನ್ನಲಾಗಿದೆ.
ಇದಾದ ಕೆಲವು ದಿನಗಳ ನಂತರ, ಬ್ಯಾಂಕ್ ಭೇಟಿಗೆಂದು ತೆರಳಿದ ಸಮಯದಲ್ಲಿ, ಹಣ ವರ್ಗಾವಣೆಯಾಗಿರುವುದು ಮಹಿಳೆ ತಿಳಿದಿದೆ. ಅವರ ಒಟ್ಟು ಮೂರು ಬ್ಯಾಂಕ್ ಖಾತೆಗಳಿಂದ ಸುಮಾರು 18.5 ಲಕ್ಷ ರೂಪಾಯಿ ಗಳನ್ನು ಕಳೆದುಕೊಂಡಿದ್ದಾರೆ. ಆಕೆ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಆರೋಪಿ ಆಕೆಯ ಫೋನ್ ಸಂಪರ್ಕ ಪಡೆದಿದ್ದಾನೆ ಎನ್ನುವುದು ಪೊಲೀಸರು ನಂಬಿಕೆ. ಈ ಕುರಿತಾಗಿ ಪ್ರಕರಣ ದಾಖಲಾಗಿದ್ದು ತನಿಖೆ ಅರಂಭಿಸಲಾಗಿದೆ.
ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಪುಣೆಯ ಉದ್ಯಮಿಯೊಬ್ಬರು ಪೊಲೀಸ್ ಅಧಿಕಾರಿಗಳಂತೆ ನಟಿಸಿದ ವಂಚಕರಿಂದ 2.3 ಕೋಟಿ ರೂ.ಗಳನ್ನು ಕಳೆದುಕೊಂಡರು. ಇನ್ನೊಂದು ಪ್ರಕರಣದಲ್ಲಿ, ಬೆಂಗಳೂರಿನ ಹಲವಾರು ಹಿರಿಯ ನಾಗರಿಕರನ್ನು ನಕಲಿ ಕೆವೈಸಿ ನವೀಕರಣ ಸಂದೇಶಗಳ ಮೂಲಕ ಮೋಸಗೊಳಿಸಲಾಗಿದೆ.






