ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಕುಡುಕನೊಬ್ಬ ಭಾರಿ ಗೊಂದಲಕ್ಕೆ ಕಾರಣನಾಗಿದ್ದಾನೆ. ಕಂಠಪೂರ್ತಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ದೇವಸ್ಥಾನದ ಕಾಂಪೌಂಡ್ ಹಾರಿಕೊಂಡು ಒಳನುಗ್ಗಿದ್ದಾನೆ. ಬಳಿಕ ದೇಗುಲದ ಗೋಡೆ ಹತ್ತಿ ಗೋಪುರದ ಮೇಲೆ ಏರಿದ್ದಾನೆ.
ಇದನ್ನು ಓದಿ: ನೀವು ಎಂದಾದರೂ ಯೋಚಿಸಿದ್ದೀರಾ? ನಾವು ದಿನನಿತ್ಯ ಬಳಸುವ Emoji ಗಳ ಹಿಂದೆ ಇರುವ ಕಥೆ
ಗೋಪುರದ ಮೇಲೆ ಕುಳಿತಿದ್ದ ಆತ, ತನಗೆ ಮದ್ಯದ ಬಾಟಲಿ ನೀಡುವಂತೆ ಹಠ ಹಿಡಿದಿದ್ದಲ್ಲದೆ, ಅಲ್ಲಿದ್ದ ಕಳಶಗಳನ್ನು ಎಳೆಯಲು ಯತ್ನಿಸಿ ಕೆಲ ಕಾಲ ತೀವ್ರ ಆತಂಕ ಸೃಷ್ಟಿಸಿದ್ದಾನೆ. ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಆತ ಕೆಳಗೆ ಇಳಿಯಲು ನಿರಾಕರಿಸಿದ್ದಾನೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು, ಸುಮಾರು ಎರಡು-ಮೂರು ಗಂಟೆಗಳ ಕಾಲ ಆತ ಗೋಪುರದ ಮೇಲೆ ಕುಳಿತೇ ಹಠ ಹಿಡಿದಿದ್ದ. ಕೊನೆಗೆ ಪೊಲೀಸರು ಆತನ ಬೇಡಿಕೆ ಈಡೇರಿಸುವಂತೆ ನಾಟಕವಾಡಿ, ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.
ಕುಡುಕನನ್ನು ಕುಟ್ಟಡಿ ತಿರುಪತಿ (45) ಎಂದು ಗುರುತಿಸಲಾಗಿದ್ದು, ಈತ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕೂರ್ಮವಾಡ ಗ್ರಾಮದ ಪೆದ್ದಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ಎನ್ನಲಾಗಿದೆ. ಆತನನ್ನು ತಿರುಪತಿ ಪೂರ್ವ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿರುಪತಿ ಪೂರ್ವ ಡಿಎಸ್ಪಿ ಎಂ. ಭಕ್ತವತ್ಸಲಂ ನಾಯ್ಡು ತಿಳಿಸಿದ್ದಾರೆ.
ಈ ಘಟನೆ ದೇವಸ್ಥಾನದ ಭದ್ರತಾ ವ್ಯವಸ್ಥೆ ಬಗ್ಗೆ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಇದು ಭದ್ರತಾ ಲೋಪ ಎಂದು ಅನೇಕರು ಆರೋಪಿಸಿದ್ದಾರೆ. ಸದ್ಯ ಪ್ರಕರಣದ ಕುರಿತು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.







1 thought on “ತಿರುಪತಿ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಕುಡುಕನ ಅವಾಂತರ; ಗೋಪುರ ಏರಿ ಕಳಶ ಎಳೆಯಲು ಯತ್ನ”
Comments are closed.