ಸಿಲಿಕಾನ್ ಸಿಟಿಯ ಇಂದಿರಾನಗರದಲ್ಲಿ ಗುರುವಾರ (ಜ.8) ರಾತ್ರಿ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ಚಾಲಕನೊಬ್ಬ ಅತಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹಾರಿ ನೇರವಾಗಿ ರೆಸ್ಟೋರೆಂಟ್ಗೆ ಗುದ್ದಿದ ಭಯಾನಕ ಘಟನೆ ನಡೆದಿದೆ. ಈ ಅವಘಡದಲ್ಲಿ ಓರ್ವ ಬೈಕ್ ಸವಾರ ಸೇರಿದಂತೆ ರಸ್ತೆ ಬದಿಯಲ್ಲಿ ನಿಂತಿದ್ದ ಹಲವರು ಪವಾಡದಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಭೀಕರ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೃಶ್ಯಾವಳಿ ನೋಡುವವರ ಎದೆ ಝಲ್ ಎನ್ನುವಂತಿದೆ.
ಇದನ್ನು ಓದಿ: 200 ರೂಪಾಯಿ ಖರ್ಚಿನ ವಿಚಾರಕ್ಕೆ ಗಂಡ–ಹೆಂಡತಿ ಜಗಳ: ತಾಯಿ ಆತ್ಮಹತ್ಯೆ, ಇಬ್ಬರು ಪುಟ್ಟ ಮಕ್ಕಳು ಅನಾಥ…
ರಾತ್ರಿ ಸುಮಾರು 11:35ರ ವೇಳೆಗೆ ಇಂದಿರಾನಗರದ 18ನೇ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸ್ಕೋಡಾ ಕಾರು ಚಾಲಕ ಮದ್ಯಪಾನ ಮಾಡಿಕೊಂಡ ಸ್ಥಿತಿಯಲ್ಲಿ ರಸ್ತೆಯ ತಿರುವಿನಲ್ಲಿ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಕಾರು ಮೊದಲು ಡಿವೈಡರ್ ಮೇಲೆ ಹತ್ತಿ, ಅಲ್ಲಿಂದ ಜಿಗಿದು ಎದುರಿನ ರೆಸ್ಟೋರೆಂಟ್ ಗೋಡೆಗೆ ಬಲವಾಗಿ ಢಿಕ್ಕಿ ಹೊಡೆದು ನಿಂತಿದೆ.
ಅತಿ ವೇಗದಲ್ಲಿ ಬಂದ ಕಾರು ಬೈಕಿಗೆ ಢಿಕ್ಕಿ ಹೊಡೆಯುತ್ತಿದ್ದಂತೆ ಭಾರೀ ಶಬ್ದ ಕೇಳಿದ ರೆಸ್ಟೋರೆಂಟ್ ಮುಂಭಾಗದಲ್ಲಿ ನಿಂತಿದ್ದ ಯುವಕರ ಗುಂಪು ತಕ್ಷಣ ಎಚ್ಚೆತ್ತು ಪಕ್ಕಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಡಿವೈಡರ್ ದಾಟುತ್ತಿದ್ದ ಕ್ಷಣದಲ್ಲಿ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಫುಡ್ ಡೆಲಿವರಿ ಯುವಕನೊಬ್ಬ ಕೂದಲೆಳೆ ಅಂತರದಲ್ಲಿ ಅಪಾಯದಿಂದ ತಪ್ಪಿಸಿಕೊಂಡಿರುವುದು ಸಿಸಿ ಕ್ಯಾಮೆರಾ ದೃಶ್ಯಗಳಲ್ಲಿ ಕಂಡುಬಂದಿದೆ.
ಘಟನೆಯ ಸಂಬಂಧ ಕಾರು ಚಾಲಕ ಡೆರಿಕ್ ಟೋನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.






