ಬೆಂಗಳೂರು : ರೈಲು ಹರಿದು ಕೈ ಕಟ್ ಆಗಿದ್ದರೂ ಗಾಂಜಾ ನಶೆಯಲ್ಲಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ನಿರಾಕರಿಸಿ ಆಂಬ್ಯುಲನ್ಸ್‌ನಿಂದ ಜಿಗಿದು ಓಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಕುಂಬಾರ ಬೀದಿಯಲ್ಲಿ ನಡೆದಿದೆ.
ಇದನ್ನು ಓದಿ: 17 ವರ್ಷದ ಅಪ್ರಾಪ್ತ ಬಾಲಕಿ ಗರ್ಭಿಣಿ: 9ನೇ ತರಗತಿ ವಿದ್ಯಾರ್ಥಿಯಿಂದ ಕೃತ್ಯ…!
ಉತ್ತರ ಭಾರತ ಮೂಲದ ದಿಲೀಪ್ ಎಂಬ ವ್ಯಕ್ತಿ ರಾತ್ರಿ ಗಾಂಜಾ ಮತ್ತಿನಲ್ಲಿ ರೈಲ್ವೆ ಹಳಿ ಮೇಲೆ ಮಲಗಿದ್ದ ವೇಳೆ ರೈಲು ಹರಿದು ಆತನ ಕೈ ಸಂಪೂರ್ಣವಾಗಿ ಕಟ್ ಆಗಿದೆ. ಘಟನೆ ಗಮನಿಸಿದ ಸ್ಥಳೀಯರು ತುಂಡಾದ ಕೈಯನ್ನು ಕವರ್‌ನಲ್ಲಿ ಇಟ್ಟು ತಕ್ಷಣವೇ 108 ಆಂಬ್ಯುಲನ್ಸ್ ಕರೆಸಿ ದಿಲೀಪ್ ಅನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ.
ಆದರೆ ಗಾಂಜಾ ನಶೆಯಲ್ಲಿದ್ದ ದಿಲೀಪ್ ಆಸ್ಪತ್ರೆ ಬಳಿ ಬರುತ್ತಿದ್ದಂತೆ ಆಂಬ್ಯುಲನ್ಸ್‌ನಿಂದ ಇಳಿದು ರಸ್ತೆ ಮಧ್ಯೆಯೇ ಓಡಿ ಹೋಗಿದ್ದಾನೆ. ದೇವನಹಳ್ಳಿ ಹಳೆ ಬಸ್ ನಿಲ್ದಾಣದ ಬಳಿ ತಪ್ಪಿಸಿಕೊಂಡ ಆತ, ಬಳಿಕ ಕುಂಬಾರ ಬೀದಿಯ ಮನೆಗಳ ನಡುವೆ ಅಡಗಿಕೊಂಡಿದ್ದಾನೆ.
ಸ್ಥಳೀಯರು ಮಾಹಿತಿ ನೀಡಿದ ನಂತರ ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶೋಧ ನಡೆಸಿ ದಿಲೀಪ್ ಅನ್ನು ಪತ್ತೆಹಚ್ಚಿ ಮರುಕಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರೂ ಬಾರಿ ಆಂಬ್ಯುಲನ್ಸ್‌ಗೆ ಹತ್ತಿಸಿದರೂ ಆತ ಚಿಕಿತ್ಸೆ ಪಡೆಯಲು ನಿರಾಕರಿಸಿ ಓಡಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲೂ ಕೂಡ ಕೈಗೆ ಬ್ಯಾಂಡೇಜ್ ಹಾಕಿಸಿಕೊಳ್ಳಲು ಆತ ಮೊಂಡಾಟ ತೋರಿದ್ದಲ್ಲದೆ, ತನ್ನ ಬಳಿ ಹಣವಿಲ್ಲ ಎಂದು ಚಿಕಿತ್ಸೆ ಬೇಡ ಎಂದು ನಾಟಕ ಮಾಡಿದ್ದಾನೆ. ಬಳಿಕ ಪೊಲೀಸರ ಮನವರಿಕೆಯಿಂದ ಕೈಗೆ ಡ್ರೆಸ್ಸಿಂಗ್ ಮಾಡಲಾಗಿದ್ದು, ಸದ್ಯ ದಿಲೀಪ್‌ನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.






