ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿರುವ ಕೆಲವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಶುರುವಾಗಿದೆ. ತಮ್ಮನ್ನು ತಾವೇ ಬಾಂಗ್ಲಾದೇಶ ಮೂಲದವರು ಎಂದು ಹೇಳಿಕೊಳ್ಳುವ ಮೂವರು ಆಟೋ ಚಾಲಕರು ಕಾಣಿಸುವ ವಿಡಿಯೋ ಒಂದು ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತು ಅನುಮಾನಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ, ಯಾವುದೇ ದಾಖಲೆಗಳಿಲ್ಲದೇ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದೇವೆ ಎಂದು ಆ ಮೂವರು ಹೇಳಿಕೊಳ್ಳುತ್ತಿರುವುದು ಗೋಚರಿಸುತ್ತದೆ. ಭದ್ರತಾ ಸಿಬ್ಬಂದಿ ಕೆಲಸ ಮಾಡಿದರೆ ಕೇವಲ 8ರಿಂದ 10 ಸಾವಿರ ರೂ. ಸಂಬಳ ಮಾತ್ರ ಸಿಗುತ್ತದೆ, ಆದರೆ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡಿದರೆ ಹೆಚ್ಚಿನ ಆದಾಯ ಸಾಧ್ಯ ಎಂದು ಹೇಳುತ್ತಾ, ತಮ್ಮ ಊರಿನವರಿಗೆ “ಬೆಂಗಳೂರು ಬನ್ನಿ” ಎಂದು ಆಹ್ವಾನಿಸುತ್ತಿರುವ ದೃಶ್ಯಗಳೂ ಅದರಲ್ಲಿ ಇವೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, “ಕಾನೂನು ದಾಖಲೆಗಳಿಲ್ಲದೇ ಇವರು ಹೇಗೆ ಆಟೋ ಓಡಿಸುತ್ತಿದ್ದಾರೆ?”, “ವಿದೇಶಿಗರು ನಗರದಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವುದು ಕಾನೂನುಸಮ್ಮತವೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಪ್ರತಿಧ್ವನಿಸುತ್ತಿವೆ.
ಇದರಿಂದ ಈ ಮೂವರು ಚಾಲಕರ ಹಿನ್ನೆಲೆಯ ಬಗ್ಗೆ ಗಂಭೀರ ಅನುಮಾನಗಳು ವ್ಯಕ್ತವಾಗಿವೆ.
ಸಾಮಾಜಿಕ ಜಾಲತಾಣ ಬಳಕೆದಾರರು, ಈ ಚಾಲಕರು ಬಾಂಗ್ಲಾದೇಶ ಮೂಲದವರಾಗಿರಬಹುದೆಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಇದರ ಸತ್ಯಾಸತ್ಯತೆ ಪರಿಶೀಲಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಕೆಲವರು ಇದನ್ನು ದೇಶದ ಭದ್ರತೆಯೊಂದಿಗೂ ಸಂಬಂಧಿಸಿದ ಗಂಭೀರ ವಿಚಾರವೆಂದು ಹೇಳಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವಲಸೆ, ಉದ್ಯೋಗ ಹಾಗೂ ದಾಖಲೆ ಪರಿಶೀಲನೆ ಕುರಿತಂತೆ ಮತ್ತೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಸದ್ಯ ವಿಡಿಯೋದಲ್ಲಿನ ಆರೋಪಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಿಲ್ಲ. ಆದರೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ, ಪೊಲೀಸ್ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಸ್ಪಷ್ಟನೆ ಹಾಗೂ ತನಿಖೆ ನಡೆಯಬೇಕೆಂಬ ಒತ್ತಾಯ ಜೋರಾಗಿದೆ.
ಈ ವಿಚಾರಕ್ಕೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಕನ್ನಡಿಗ ಆಟೋ ಚಾಲಕರ ಉದ್ಯೋಗವನ್ನು ವಲಸಿಗರು ಕಬಳಿಸುತ್ತಿರುವುದು ಹೇಗೆ ಸಾಧ್ಯ? ಇವರೆಲ್ಲ ಯಾರು, ಯಾವ ರಾಜ್ಯದವರು? ಇವರಿಗೆ ಪರ್ಮಿಟ್ ನೀಡಿದವರು ಯಾರು? ಇವರ ವಿಳಾಸಗಳೇನು? ಆಟೋ ಚಾಲನೆಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ ತಮ್ಮವರನ್ನು ಆಹ್ವಾನಿಸುವ ಧೈರ್ಯ ಹೇಗೆ ಬಂದಿದೆ? ಇದನ್ನು ಕೇಳುವವರೇ ಇಲ್ಲವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#ಬೆಂಗಳೂರು #Auto Driver #Viral Video
ದಾಖಲೆ ಇಲ್ಲದೆ ಆಟೋ ಚಾಲನೆ? “ಬೆಂಗಳೂರು ಬನ್ನಿ” ಎಂಬ ಆಹ್ವಾನ ವಿಡಿಯೋ ವೈರಲ್!! ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳು..
By krutika naik
On: December 29, 2025 6:59 AM
---Advertisement---






