ಪ್ರಾಣಿಗಳಿಗೂ ದೇವರ ಮೇಲಿನ ನಂಬಿಕೆ ಮತ್ತು ಭಕ್ತಿ ಇದೆ ಎಂಬುದನ್ನು ತೋರಿಸುವ ಹಲವು ಘಟನೆಗಳು ಹಿಂದೆ ನಡೆದಿವೆ. ಕೆಲಕಾಲದ ಹಿಂದೆ ಮಹಾರಾಷ್ಟ್ರದ ಶನಿ ದೇವಾಲಯದಲ್ಲಿ ಬೆಕ್ಕೊಂದು ದೇವರ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಅಪರೂಪದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ದೇವಾಲಯವೊಂದರಲ್ಲಿ ನಡೆದಿದೆ.
ಇದನ್ನು ಓದಿ: 25,000 ಇಲಿಗಳು ವಾಸಿಸುವ ಅದ್ಭುತ ದೇವಾಲಯ ಕರ್ಣಿ ಮಾತಾ ದೇವಸ್ಥಾನ
ಇದನ್ನು ಓದಿ: ಈ ದೇವಾಲಯದಲ್ಲಿ ಪಿಜ್ಜಾ, ಪಾನಿಪುರಿಯೇ ಪ್ರಸಾದ – ಇದರ ಹಿಂದೆ ಇದೆ ಮಹತ್ವದ ಕಾರಣ
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ತೆಹಸಿಲ್ ವ್ಯಾಪ್ತಿಯ ನಂದಪುರ ಗ್ರಾಮದಲ್ಲಿರುವ ಪ್ರಾಚೀನ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು ಕಳೆದ 48 ಗಂಟೆಗಳಿಂದ ಹನುಮಂತನ ವಿಗ್ರಹದ ಸುತ್ತ ನಿರಂತರವಾಗಿ ಸುತ್ತುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಸೋಮವಾರ ಬೆಳಗಿನ ಜಾವ 4 ಗಂಟೆಯಿಂದ ಆರಂಭವಾದ ಈ ನಡವಳಿಕೆ ಯಾವುದೇ ದಣಿವಿನ ಲಕ್ಷಣವಿಲ್ಲದೆ ಮುಂದುವರಿದಿದ್ದು, ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಬೆರಗುಗೊಳಿಸಿದೆ. ನಾಯಿಯ ಈ ವರ್ತನೆಯ ಹಿಂದೆ ಏನಾದರೂ ವಿಶೇಷ ಕಾರಣವಿದೆಯೇ, ಇದು ಯಾವುದೋ ಪ್ರಾರ್ಥನೆಯ ಸಂಕೇತವೇ ಎಂಬ ಬಗ್ಗೆ ಗ್ರಾಮಸ್ಥರು ಹಾಗೂ ಭಕ್ತರು ವಿವಿಧ ರೀತಿಯಲ್ಲಿ ಚರ್ಚಿಸುತ್ತಿದ್ದಾರೆ.
ದೇವಾಲಯದ ಆವರಣದಲ್ಲೇ ಇರುವ ಈ ನಾಯಿ ಯಾರಿಗೂ ತೊಂದರೆ ನೀಡದೇ, ಶಾಂತವಾಗಿ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದು, ದೇವಾಲಯವನ್ನು ಬಿಟ್ಟು ಹೋಗುವುದೇ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಿಂದೂ ಪುರಾಣಗಳಲ್ಲಿ ಪ್ರತಿಯೊಂದು ಜೀವಿಗೂ ದೈವಿಕ ಸ್ಥಾನವಿದೆ ಎಂಬ ನಂಬಿಕೆ ಇದೆ. ಹಸು, ನಾಯಿ, ಬೆಕ್ಕು ಸೇರಿದಂತೆ ಎಲ್ಲಾ ಪ್ರಾಣಿಗಳನ್ನೂ ದೇವರ ಸ್ವರೂಪಗಳೆಂದು ಭಾವಿಸಲಾಗುತ್ತದೆ. ಶ್ವಾನವನ್ನು ಕಾಲಭೈರವನ ರೂಪವೆಂದು ಪೂಜಿಸುವ ಸಂಪ್ರದಾಯವೂ ಇದೆ. ಈ ಹಿನ್ನೆಲೆ, ಹನುಮಂತನ ವಿಗ್ರಹದ ಸುತ್ತ ಸುತ್ತುತ್ತಿರುವ ಈ ನಾಯಿಯ ನಡೆ ಭಕ್ತಿಯ ಅಭಿವ್ಯಕ್ತಿಯಂತೆ ಕಾಣುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಅಪರೂಪದ ದೃಶ್ಯವನ್ನು ಪವಾಡವೆಂದು ಭಾವಿಸಿದ ಅನೇಕ ಭಕ್ತರು ದೇವಾಲಯಕ್ಕೆ ಆಗಮಿಸಿ ಹನುಮಂತನ ಭಜನೆ ಹಾಗೂ ಪ್ರಾರ್ಥನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಘಟನೆಯನ್ನು ನೋಡಲು ಸುತ್ತಮುತ್ತಲ ಗ್ರಾಮಗಳು ಮಾತ್ರವಲ್ಲದೆ ದೂರದೂರಿನಿಂದಲೂ ಜನರು ಆಗಮಿಸುತ್ತಿದ್ದು, ನಂದಪುರ ಗ್ರಾಮದಲ್ಲಿ ಈ ವಿಚಾರ ದೊಡ್ಡ ಚರ್ಚೆಯ ವಿಷಯವಾಗಿದೆ.
ಈ ವಿಷಯದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಮುಖಂಡ ಅನೂಪ್ ಬಾಲ್ಮಿಕಿ ಅವರು ದೇವಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಇದು ನಂಬಿಕೆಯ ವಿಷಯವಾಗಿದ್ದು, ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆಡಳಿತವೂ ಈ ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದೆ.
ಪ್ರಸ್ತುತ ಉತ್ತರ ಭಾರತದಲ್ಲಿ ತೀವ್ರ ಚಳಿ ಇರುವುದರಿಂದ, ದೇವಾಲಯ ಸಮಿತಿ ಮತ್ತು ಗ್ರಾಮಸ್ಥರು ನಾಯಿಯನ್ನು ಚಳಿಯಿಂದ ರಕ್ಷಿಸುವ ಉದ್ದೇಶದಿಂದ ದೇವಾಲಯದ ಆವರಣದಲ್ಲಿ ಪಾಲಿಥಿನ್ ಹಾಳೆಗಳನ್ನು ಅಳವಡಿಸಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಬಿಜ್ನೋರ್ ಜಿಲ್ಲೆಯ ಈ ಹನುಮಾನ್ ದೇವಾಲಯದಲ್ಲಿ ನಡೆದ ಈ ವಿಚಿತ್ರ ಘಟನೆ ಇದೀಗ ಜನರಲ್ಲಿ ವಿಶೇಷ ಕುತೂಹಲ ಮತ್ತು ಭಕ್ತಿಯ ಚರ್ಚೆಗೆ ಕಾರಣವಾಗಿದೆ.






