ಹುಬ್ಬಳ್ಳಿ ಮೂಲದ ನವೀನ್ ಎಂಬಾತ ಮೂರು ವರ್ಷಗಳ ಹಿಂದೆ ದಾವಣಗೆರೆಗೆ ಬಂದು ಪೇಪರ್ ವ್ಯಾನ್ ಓಡಿಸುತ್ತಿದ್ದ. ಈ ಸಮಯದಲ್ಲಿ ಅವನಿಗೆ ಹರಪನಹಳ್ಳಿ ಮೂಲದ ಮಹಿಳೆ ಒಬ್ಬಳ ಪರಿಚಯವಾಯಿತು. ಇಬ್ಬರು ಮಕ್ಕಳ ತಾಯಿಯಾಗಿದ್ದ ಆಕೆಯೊಂದಿಗೆ ನವೀನ್‌ಗೆ ಸ್ನೇಹ ಬೆಳೆದು ಬಳಿಕ ಪ್ರೇಮವಾಗಿ ಮಾರ್ಪಟ್ಟಿತು. ಪ್ರಿಯಕರನಿಗಾಗಿ ಆಕೆ ತನ್ನ ಪತಿಯನ್ನು ಬಿಟ್ಟು, ಇಬ್ಬರು ಮಕ್ಕಳನ್ನೂ ಕರೆದುಕೊಂಡು ನವೀನ್ ಜೊತೆ ಸೇರಿಕೊಂಡಳು ಎಂಬುದು ತಿಳಿದುಬಂದಿದೆ.
ಇಬ್ಬರು ಮಕ್ಕಳ ತಾಯಿ ಹಾಗೂ ಯುವಕನ ಪ್ರೇಮ ಪ್ರಕರಣಕ್ಕೆ ಅಚ್ಚರಿ ತಿರುವು ಲಭಿಸಿದೆ. ಮೂರು ವರ್ಷಗಳಿಂದ ಸಂಬಂಧ ಬೆಳೆಸಿಕೊಂಡಿದ್ದ ನವೀನ್‌ಗೆ ಇತ್ತೀಚೆಗೆ ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗ ದೊರಕಿದೆ. ಒಳ್ಳೆಯ ಕೆಲಸ ಸಿಕ್ಕ ತಕ್ಷಣ, ನವೀನ್‌ಗೆ ಆ ಮಹಿಳೆ ಅಗತ್ಯವಿಲ್ಲವೆಂದು ತಳ್ಳಿಹಾಕಿರುವ ಆರೋಪ ಕೇಳಿಬಂದಿದೆ.
ಹರಪನಹಳ್ಳಿ ಮೂಲದ ಮಹಿಳೆ ನವೀನ್‌ನ್ನು ನಂಬಿ ಪತಿಯನ್ನು ಬಿಟ್ಟು ಬಂದಿದ್ದು, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಾಳೆ. ಆದರೆ, ನವೀನ್‌ಗೆ ಕೆಎಸ್ಆರ್‌ಟಿಸಿ ಉದ್ಯೋಗ ದೊರಕುತ್ತಿದ್ದಂತೆಯೇ ಮಹಿಳೆಯೊಂದಿಗೆ ತಿರುಗಿಬಿದ್ದು ಹೊಡೆದಿರುವ ಆರೋಪ ಕೇಳಿಬಂದಿದೆ.
“ನನ್ನ ಚಿನ್ನಾಭರಣ ಹಾಗೂ ಹಣ ಪಡೆದು ಈಗ ವಂಚಿಸುತ್ತಿದ್ದಾನೆ” ಎಂದು ಮಹಿಳೆ ದೂರಿದ್ದು, ನ್ಯಾಯ ಬೇಕೆಂದು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದಾಳೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಈ ಪ್ರೇಮ ಪ್ರಕರಣದಲ್ಲಿ, ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಜಗಳ ನಡೆದಿದ್ದರೂ, ಬುಧವಾರ ಶಾಮನೂರ ರಸ್ತೆಯ ಪಾರ್ಕ್‌ನಲ್ಲಿ ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರನ್ನೂ ಬಡಾವಣೆ ಠಾಣೆ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ಮಹಿಳೆ ನವೀನ್ ತನ್ನನ್ನು ವಂಚಿಸುತ್ತಿದ್ದಾನೆ ಎಂದು ಪೊಲೀಸರ ಮುಂದೆ ದೂರಿದ್ದಾರೆ. ಆದರೆ ನವೀನ್ ಮದ್ಯಪಾನದ ಅಮಲಿನಲ್ಲಿದ್ದ ಕಾರಣ, ಮರುದಿನ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.






