ತಂದೆ-ಮಗಳ ಬಾಂಧವ್ಯವೇ ಅತ್ಯುನ್ನತ ಸಂಬಂಧ. ಮಗಳಿಗೆ ತಂದೆ ಅಂದರೆ ಮಾರ್ಗದರ್ಶಕ, ಮೊದಲ ಹೀರೋ, ಬದುಕಿನ ಆಧಾರ. ಯಾರಾದರೂ ನೋವು ಕೊಟ್ಟರೆ ‘ನನ್ನ ತಂದೆಯೇ ನನ್ನ ರಕ್ಷಕ’ ಎಂಬ ವಿಶ್ವಾಸ ಆಕೆಗೆ ಇರುತ್ತದೆ. ಆದರೆ ದುರ್ಭಾಗ್ಯವೆಂದರೆ ಇಲ್ಲೊಬ್ಬ ಕಾಮದ ಹುಚ್ಚು ಹಿಡಿದ ತಂದೆ, ತನ್ನ ಹೆತ್ತ ಮಗಳ ಮೇಲೆಯೇ ಕೇಡಾದ ನೋಟ ಹಾಕಿ ಜೈಲು ಸೇರಿದ್ದಾನೆ.
ದಾವಣಗೆರೆ ಜಿಲ್ಲೆಯ ಹದಡಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ತಾಯಿ ತನ್ನ ಪತಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಮಗಳ ಮೇಲೆ ಕಾಮದ ದೃಷ್ಟಿ ತೋರಿದ ಗಂಡನ ವಿರುದ್ಧ ತಾಯಿ ಧೈರ್ಯವಾಗಿ ದೂರು ನೀಡಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ಪ್ರಾರಂಭವಾಗಿದೆ.
ಜಿಲ್ಲೆಯ ಗ್ರಾಮವೊಂದರಲ್ಲಿ 17 ವರ್ಷದ ಬಾಲಕಿ ಬ್ಯೂಟಿಷಿಯನ್ ಆಗಬೇಕೆಂಬ ಕನಸನ್ನು ಹೊತ್ತು ತರಬೇತಿಗೆ ಸೇರಿಕೊಂಡಿದ್ದಳು. ಆದರೆ ತಂದೆ ಗಣೇಶನಿಗೆ ಮಗಳ ಕನಸು ಹಾಗೂ ನಡೆ-ನುಡಿಗಳು ಇಷ್ಟವಿರಲಿಲ್ಲ. ಸದಾ ಮಗಳ ಮೇಲೆ ಅನುಮಾನ ಪಡುತ್ತಿದ್ದ ಆತ, ಮಗಳನ್ನು ತಕ್ಷಣವೇ ಮದುವೆ ಮಾಡಬೇಕು ಎಂದು ನಿರ್ಧರಿಸಿ, ಸಂಬಂಧಿಕರಲ್ಲಿಯೇ ಒಬ್ಬ ಹುಡುಗನನ್ನು ನೋಡಿ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದಾನೆ.
ಹೀಗೆ ಬಾಲ್ಯ ವಿವಾಹ ಮಾಡಲು ಮುಂದಾಗುವ ಮೂಲಕ ಕಾನೂನು ಮುರಿದಿದ್ದ ತಂದೆ ಗಣೇಶ ಅದಕ್ಕೂ ಮುನ್ನ ಮಗಳಿಗೆ ಒಳ್ಳೆಯದಾಗಲಿ ಎಂದು ಶಿವಮೊಗ್ಗ ಜಿಲ್ಲೆಯ ದೇವಸ್ಥಾನವೊಂದಕ್ಕೆ ಆಕೆಯನ್ನು ಕರೆದೊಯ್ದು ಪೂಜೆ ಮಾಡಿಸಿದ್ದ. ಬಳಿಕ ಶಿವಮೊಗ್ಗದ ಲಾಡ್ಜ್ ಒಂದರಲ್ಲಿ ಉಳಿದುಕೊಳ್ಳಲೆಂದು ಕರೆದೊಯ್ದು ಅಲ್ಲೂ ಆಕೆಯನ್ನು ನಿಂದಿಸಿದ್ದಾನೆ. ಅಲ್ಲದೇ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಈ ವೇಳೆ ಕೂಗಿಕೊಂಡು ಹೊರಬಂದ ಮಗಳು ಪಾಪಿ ತಂದೆಯ ಕಾಮ ಕೃತ್ಯದಿಂದ ಪಾರಾಗಿದ್ದಾಳೆ. ಬಳಿಕ ತಾಯಿಯೇ ತನ್ನ ಪತಿಯ ವಿರುದ್ಧ ದೂರು ನೀಡಿದ್ದಾರೆ. ಮಗಳೂ ಸಹ ತನ್ನ ತಂದೆಯ ವಿಕೃತಿಯನ್ನು ದೂರಿನಲ್ಲಿ ಬಿಚ್ಚಿಟ್ಟಿದ್ದಾಳೆ. ಬೆಳೆದ ಮಗಳಿಗೆ ಸರಿಯಾದ ಮಾರ್ಗದರ್ಶನ ಬೇಕಾದ ವಯಸ್ಸಿನಲ್ಲಿ ಆಕೆಯನ್ನು ಮನ ಬಂದಂತೆ ನಡೆಸಿಕೊಳ್ಳಲು ಮುಂದಾಗಿದ್ದ ನೀಚ ತಂದೆ ಈಗ ಪೋಕ್ಸೊ ಕೇಸ್ನಲ್ಲಿ ಜೈಲು ಸೇರಿದ್ದಾನೆ.







1 thought on “ದಾವಣಗೆರೆ: ಮಗಳ ಮೇಲೆ ದೌರ್ಜನ್ಯ ಮಾಡಲು ಮುಂದಾದ ಕಪಟಿ ತಂದೆ!”