ಬೆಂಗಳೂರಿನ ಅರಳಸಂದ್ರ ಗ್ರಾಮದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ನಡೆದ ಹಸುಗಳ ಕೆಚ್ಚಲು ಕತ್ತರಿಸಿದ ವಿಕೃತಿ ಪ್ರಕರಣ ಮರೆಯುವ ಮುನ್ನವೇ, ಈಗ ಎರಡು ಹಸುಗಳ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಅಮಾನುಷ ಕೃತ್ಯ ನಡೆದಿದೆ.
ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಹೊರವಲಯದಲ್ಲಿ, ರಸ್ತೆಯ ಮಧ್ಯೆ ಎರಡು ಹಸುಗಳ ಕತ್ತು ಕೊಯ್ದು ಹತ್ಯೆ ಮಾಡಿ, ಅಪರಿಚಿತರು ಅಲ್ಲಿಯೇ ಎಸೆದು ಹೋಗಿದ್ದಾರೆ. ಈ ಅಮಾನುಷ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಮುಂಜಾನೆ ಈ ಘಟನೆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಕೂಡಲೇ ಅವರು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ರೀತಿ ನಿರಂತರವಾಗಿ ಜಾನುವಾರುಗಳ ಮೇಲೆ ವಿಕೃತಿ ಕೃತ್ಯಗಳು ನಡೆಯುತ್ತಿರುವುದು ಗ್ರಾಮಸ್ಥರನ್ನು ಭೀತಿಗೊಳಿಸಿದೆ. ಈ ಹಿಂದೆಯೂ ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ಪ್ರಕರಣಗಳು ವರದಿಯಾಗಿದ್ದವು. ಈಗ ನೇರವಾಗಿ ಹತ್ಯೆ ಮಾಡಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
‘ನಮ್ಮ ಊರಿನಲ್ಲಿ ಇಂತಹ ಅಮಾನವೀಯ ಕೃತ್ಯಗಳು ಹೆಚ್ಚುತ್ತಿವೆ. ನಮ್ಮ ಜಾನುವಾರುಗಳ ರಕ್ಷಣೆ ಕಷ್ಟವಾಗಿದೆ. ಪೊಲೀಸರು ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತವೆ’ ಎಂದು ಆಗ್ರಹಿಸಿದ್ದಾರೆ.
ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರ ತನಿಖೆಯಿಂದಷ್ಟೇ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.