ಬೆಂಗಳೂರು (ಜ.28): ಕರ್ತವ್ಯನಿಷ್ಠ IAS ಅಧಿಕಾರಿ ದಿವಂಗತ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಮಹತ್ವದ ಆಸರೆಯಾಗಿ ನಿಂತಿದೆ. ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಮಹಾಂತೇಶ್ ಅವರ ಪುತ್ರಿ ಕುಮಾರಿ ಚೈತನ್ಯಾ ಎಂ. ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕ ಹುದ್ದೆಗೆ ನೇಮಕಾತಿ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಚೈತನ್ಯಾ ಬೀಳಗಿ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಉಪಸ್ಥಿತರಿದ್ದು, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕುಟುಂಬಕ್ಕೆ ಧೈರ್ಯ ತುಂಬಿದರು.
ಇದನ್ನು ಓದಿ: ಮಲ್ಪೆ ದೋಣಿ ಅಪಘಾತದಲ್ಲಿ ಯೂಟ್ಯೂಬರ್ ನಿಶಾ, ಮಧು ಗೌಡ ಸೇರಿದಂತೆ 3 ಮಂದಿ ಸಾವನ್ನಪ್ಪಿದರು
ಇದನ್ನು ಓದಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನ
ಅಧಿಕೃತ ಆದೇಶದಂತೆ, ಸೇವೆಯಲ್ಲಿದ್ದಾಗಲೇ 25-11-2025ರಂದು ನಿಧನರಾದ ಮಹಾಂತೇಶ್ ಬೀಳಗಿ ಅವರ ಅವಲಂಬಿತರಿಗೆ ನೆರವು ನೀಡುವ ಉದ್ದೇಶದಿಂದ ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು–1996ರ ನಿಯಮ 6(1)ರಡಿ ಈ ನೇಮಕಾತಿ ಮಾಡಲಾಗಿದೆ. ಚೈತನ್ಯಾ ಅವರನ್ನು ₹49,050 ರಿಂದ ₹92,500 ವೇತನ ಶ್ರೇಣಿಯ ಸಹಾಯಕ ಹುದ್ದೆಗೆ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯೊಂದಿಗೆ ನೇಮಿಸಲಾಗಿದೆ.
ನೇಮಕಾತಿ ಆದೇಶದ ಷರತ್ತುಗಳಂತೆ, ಆದೇಶ ಹೊರಡಿಸಿದ 15 ದಿನಗಳೊಳಗೆ ಅಭ್ಯರ್ಥಿಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ–1), ಬಹುಮಹಡಿ ಕಟ್ಟಡದ ಕೊಠಡಿ ಸಂಖ್ಯೆ 428ರಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಜೊತೆಗೆ, ವ್ಯಾಸಂಗ ಮಾಡಿದ ಸಂಸ್ಥೆಗೆ ಸಂಬಂಧಿಸದ ಇಬ್ಬರು ಗಣ್ಯರಿಂದ ಪಡೆದ ನಡತೆ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಒಬ್ಬ ದಕ್ಷ ಹಾಗೂ ನಿಷ್ಠಾವಂತ ಅಧಿಕಾರಿಯ ಕುಟುಂಬಕ್ಕೆ ಸರ್ಕಾರ ಈ ಮೂಲಕ ನೈತಿಕ ಹಾಗೂ ಆರ್ಥಿಕ ಬೆಂಬಲ ನೀಡಿದ್ದು, ಚೈತನ್ಯಾ ಅವರು ತಮ್ಮ ತಂದೆಯ ಹಾದಿಯಲ್ಲೇ ಸಾರ್ವಜನಿಕ ಸೇವೆಗೆ ಕೊಡುಗೆ ನೀಡಲಿ ಎಂಬುದು ಎಲ್ಲರ ಆಶಯವಾಗಿದೆ.





