---Advertisement---

ಚಿತ್ರದುರ್ಗ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಇಲ್ಲ, ಬಡವರ ಪೆಟ್ಟಿಗೆ ಅಂಗಡಿಗಳ ತೆರವು ಮಾಡಲು ಆದೇಶ!!

On: September 7, 2025 7:53 AM
Follow Us:
ಚಿತ್ರದುರ್ಗ: ಅಕ್ರಮ ಕಟ್ಟಡಗಳ ಮೇಲೆ ಕ್ರಮ ಇಲ್ಲ, ಬಡವರ ಪೆಟ್ಟಿಗೆ ಅಂಗಡಿಗಳ ತೆರವು ಮಾಡಲು ಆದೇಶ!!
---Advertisement---

ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದವರೆಗೂ ಪ್ರಭಾವಿಗಳು ಕಟ್ಟಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿಲ್ಲ. ಪ್ರಭಾವಿಗಳು ನಿರ್ಮಿಸಿರುವ ಅಕ್ರಮ ಕಟ್ಟಡಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದ ನಗರಸಭೆ, ವಿಜ್ಞಾನ ಕಾಲೇಜು ಪಕ್ಕದ ಸರ್ವಿಸ್‌ ರಸ್ತೆಯಲ್ಲಿ ಬಡವರ ಪೆಟ್ಟಿಗೆ ಅಂಗಡಿಗಳನ್ನು ಮಾತ್ರ ತೆರವು ಮಾಡಲು ಆದೇಶಿಸಿರುವುದು ‘ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ’ ಹಾಯಿಸಿದಂತಾಗಿದೆ ಎಂದು ಜನರು ಆಕ್ರೋಶಗೊಂಡಿದ್ದಾರೆ.

ಜಿಲ್ಲೆಯ ನಾನಾ ಕಡೆಗಳಿಂದ ಬಡ ವಿದ್ಯಾರ್ಥಿಗಳು ಸರ್ಕಾರಿ ವಿಜ್ಞಾನ ಕಾಲೇಜು, ಪಿಯು ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಿಗೆ ಓದಲು ಬರುತ್ತಾರೆ. ಬೆಳಗ್ಗೆ ಬೇಗನೆ ಬಸ್‌ ಹಿಡಿದು ಬರುವ ಈ ವಿದ್ಯಾರ್ಥಿಗಳಿಗೆ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗಳಲ್ಲಿ ಕೇವಲ ₹30ಕ್ಕೆ ಸಿಗುವ ಅಗ್ಗದ ತಿಂಡಿ ದೊಡ್ಡ ಸಹಾಯವಾಗುತ್ತಿದೆ. ವಿದ್ಯಾರ್ಥಿಗಳಷ್ಟೇ ಅಲ್ಲ, ಕಾಲೇಜಿನ ಸಿಬ್ಬಂದಿ ಹಾಗೂ ಸಾರ್ವಜನಿಕರೂ ಸಹ ಈ ಅಂಗಡಿಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಸುಮಾರು 25 ರಿಂದ 30 ಅಂಗಡಿಗಳನ್ನು ರಸ್ತೆಬದಿಯಿಂದ ತೆರವುಗೊಳಿಸಬೇಕೆಂದು ನಗರಸಭೆ ನೋಟಿಸ್‌ ನೀಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್‌ ಬಂಡಾರು ಅವರ ನಿರ್ದೇಶನದ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಸ್ಪಷ್ಟಪಡಿಸಿದೆ. ಸೆ.6ರೊಳಗೆ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಕಡ್ಡಾಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಈ ನಿರ್ಧಾರದಿಂದ ಪೆಟ್ಟಿಗೆ ಅಂಗಡಿಗಳ ಮೂಲಕ ಜೀವನ ನಡೆಸುತ್ತಿರುವ ನೂರಾರು ಕುಟುಂಬಗಳು ಅನಿಶ್ಚಿತತೆಯ ನಡುವೆ ಸಿಲುಕಿಕೊಂಡಿವೆ.

“ಗಣಪತಿ ಶೋಭಾಯಾತ್ರೆ ಅಂಗವಾಗಿ ತಾತ್ಕಾಲಿಕವಾಗಿ ಕ್ರಮ ವಹಿಸುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಶಾಶ್ವತವಾಗಿ ಅಂಗಡಿ ತೆಗೆಯುವಂತೆ ಸೂಚನೆ ಕೊಟ್ಟಿರುವುದರಿಂದ ಆತಂಕವಾಗಿದೆ. ಕಾಲೇಜು ಸುತ್ತಮುತ್ತ ಇರುವ ದೊಡ್ಡ ಹೋಟೆಲ್‌ ಮಾಲೀಕರ ಲಾಬಿಯಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ” ಎಂದು ಪೆಟ್ಟಿಗೆ ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

ಚಳ್ಳಕೆರೆ ಗೇಟ್‌ನಿಂದ ಹೆದ್ದಾರಿ ಎಡಭಾಗದ ಸರ್ವಿಸ್‌ ರಸ್ತೆಯಲ್ಲಿ ಇರುವ ಈ ಪೆಟ್ಟಿಗೆ ಅಂಗಡಿಗಳು ಸಂಚಾರಕ್ಕೆ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ. ರಸ್ತೆ ಬದಿಯಲ್ಲಿ ಸಾಕಷ್ಟು ಜಾಗ ಇರುವ ಕಾರಣ ವಾಹನ ಸಂಚಾರ ಸುಗಮವಾಗಿಯೇ ಇರುತ್ತದೆ. ಬೆಳಿಗ್ಗೆ 7ರಿಂದ 10ರೊಳಗೆ ಮಾತ್ರ ತಿಂಡಿ ಮಾರಾಟ ನಡೆಯುತ್ತದೆ ಮತ್ತು ಕಾಲೇಜು ಪ್ರಾರಂಭವಾದ ತಕ್ಷಣ ಅಂಗಡಿಗಳು ಮುಚ್ಚಲ್ಪಡುತ್ತವೆ. ವಿದ್ಯಾರ್ಥಿಗಳಿಗೆ ಬೆಳಗಿನ ತಿಂಡಿಗೆ ಈ 3 ಗಂಟೆಯ ಅವಧಿಯಲ್ಲಿ ಮಾತ್ರ ಅವು ತೆರೆದಿರುವುದರಿಂದ ಸಂಚಾರ ಸಮಸ್ಯೆಯೇ ಇಲ್ಲ. ಆದರೂ ನಗರಸಭೆ ಮತ್ತು ಪೊಲೀಸ್ ಅಧಿಕಾರಿಗಳು ತೆರವು ಕ್ರಮ ಕೈಗೊಳ್ಳುತ್ತಿರುವುದು ಅನುಮಾನಾಸ್ಪದ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾವು ಕೊಡುವ ರುಚಿಯನ್ನು ದೊಡ್ಡ ಅಂಗಡಿಗಳೂ ನೀಡುವುದಿಲ್ಲ. ಗುಣಮಟ್ಟದ ಎಣ್ಣೆ, ಪದಾರ್ಥಗಳನ್ನು ಬಳಸುತ್ತೇವೆ. ಆಹಾರ ಇಲಾಖೆ ಅಧಿಕಾರಿಗಳು ಬೇಕಿದ್ದರೆ ಪರೀಕ್ಷೆ ನಡೆಸಲಿ. ಗುಣಮಟ್ಟದ ಆಹಾರ ನೀಡುತ್ತಿದ್ದರೂ ನಮ್ಮ ಮೇಲೆ ನಗರಸಭೆ ಅಧಿಕಾರಿಗಳು ಬ್ರಹ್ಮಾಸ್ತ್ರ ಹೂಡಿ ತೆರವುಗೊಳಿಸಲು ಮುಂದಾಗಿದ್ದಾರೆ” ಎಂದು ಅಂಗಡಿ ಮಾಲೀಕರಾದ ರಾಜಶೇಖರ್‌ ಬೇಸರ ವ್ಯಕ್ತಪಡಿಸಿದರು.

“ಈಗಾಗಲೇ ಹಲವು ಬಾರಿ ನಮ್ಮ ಅಂಗಡಿ ತೆರವುಗೊಳಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಸ್ಥಳೀಯ ಜನಪ್ರತಿನಿಧಿಗಳು ನಮ್ಮನ್ನು ಇಲ್ಲಿಯವರೆಗೂ ರಕ್ಷಣೆ ಮಾಡುತ್ತಿದ್ದರು. ಶಾಸಕ ಕೆ.ಸಿ. ವೀರೇಂದ್ರ ಅವರು ಇ.ಡಿ. ವಶದಲ್ಲಿರುವಾಗ ಉಪಾಯ ಮಾಡಿ ನಮ್ಮನ್ನು ತೆರವುಗೊಳಿಸುತ್ತಿದ್ದಾರೆ” ಎಂದು ಅಂಗಡಿ ಮಾಲೀಕರು ಆರೋಪಿಸಿದರು.

“ನಗರಸಭೆ ಅಧ್ಯಕ್ಷರನ್ನು ಭೇಟಿ ಮಾಡಿ ಅಂಗಡಿ ತೆರವು ಮಾಡದಂತೆ ಮನವಿ ಮಾಡುತ್ತೇವೆ. ನಮ್ಮ ಜೊತೆ ಕಾಲೇಜು ವಿದ್ಯಾರ್ಥಿಗಳೂ ಬರುವುದಾಗಿ ತಿಳಿಸಿದ್ದಾರೆ. ಕಡಿಮೆ ಬೆಲೆಗೆ ಆಹಾರ ಒದಗಿಸುವ ಬಡ ವ್ಯಾಪಾರಿಗಳನ್ನು ನಗರಸಭೆ ಸದಸ್ಯರು ಅಧ್ಯಕ್ಷರು ರಕ್ಷಿಸಬೇಕು” ಎಂದು ಅವರು ಮನವಿ ಮಾಡಿದರು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment