ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀ ಬರ್ಡ್ ಬಸ್ ದುರಂತದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಈ ಮೊದಲು ಘಟನೆಯಲ್ಲಿ ಆರು ಮಂದಿ ಮೃತಪಟ್ಟಿರುವುದು ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾದವರಲ್ಲಿ ಚಾಲಕ ಮೊಹಮ್ಮದ್ ರಫೀಕ್ ಕೂಡ ಸೇರಿದ್ದು, ಇದೀಗ ಅವರ ನಿಧನದಿಂದ ಒಟ್ಟು ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಬಸ್ ಕ್ಲೀನರ್ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾನೆ. ಆದರೆ ಚಾಲಕನಿಗೆ ತೀವ್ರ ಗಾಯಗಳಾಗಿದ್ದವು. ಬಸ್‌ಗೆ ಡಿಕ್ಕಿ ಹೊಡೆದ ಕಂಟೇನರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇದೀಗ ಬಸ್ ಚಾಲಕನೂ ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ಮತ್ತಷ್ಟು ಆಘಾತ ತಂದಿದೆ. ಮನೆಯ ಏಕೈಕ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಸ್ಥರ ಅಳಲು ಮನಕಲಕುವಂತಿದೆ.
ಗೋಕರ್ಣಕ್ಕೆ ಸಾಗುತ್ತಿದ್ದ ಬಸ್‌ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಕೆಲವೇ ಕ್ಷಣಗಳಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿಯ ತೀವ್ರತೆಗೆ ಬಸ್‌ನೊಳಗಿದ್ದ ಆರು ಮಂದಿ ಹೊರಬರಲು ಸಾಧ್ಯವಾಗದೇ ಸ್ಥಳದಲ್ಲೇ ಸಜೀವ ದಹನವಾಗಿದ್ದರು. ಈ ದುರಂತ ಇಡೀ ರಾಜ್ಯವನ್ನೇ ಶೋಕದಲ್ಲಿ ಮುಳುಗಿಸಿದೆ.






