ಚೀನಾದ ಝೆಜಿಯಾಂಗ್ ಪ್ರಾಂತ್ಯದ ನ್ಯಾಯಾಲಯವು ಒಂದೇ ಕುಟುಂಬಕ್ಕೆ ಸೇರಿದ 11 ಮಂದಿಗೆ ಮರಣದಂಡನೆ ವಿಧಿಸಿದೆ. ಕೊಲೆ, ಅಕ್ರಮ ಬಂಧನ, ವಂಚನೆ, ಜೂಜು ಸೇರಿದಂತೆ ಒಟ್ಟು 14 ಗಂಭೀರ ಅಪರಾಧಗಳಲ್ಲಿ ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ದೃಢಪಡಿಸಿದೆ. ಸೆಪ್ಟೆಂಬರ್ 2025ರಲ್ಲಿ ತೀರ್ಪು ಪ್ರಕಟವಾಗಿದ್ದು, ಇತ್ತೀಚೆಗೆ ಶಿಕ್ಷೆಯನ್ನು ಜಾರಿಗೆ ತರಲಾಗಿದೆ.
ಈ ಕುಟುಂಬವು ಮ್ಯಾನ್ಮಾರ್–ಚೀನಾ ಗಡಿಯಲ್ಲಿರುವ ಕೊಕಾಂಗ್ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿತ್ತು. ತನಿಖೆಯ ಪ್ರಕಾರ, ಸುಮಾರು 1.4 ಬಿಲಿಯನ್ ಡಾಲರ್ ಮೌಲ್ಯದ ಆನ್ಲೈನ್ ವಂಚನೆ, ಟೆಲಿಕಾಂ ಸ್ಕ್ಯಾಮ್ ಹಾಗೂ ಹಣ ವರ್ಗಾವಣೆ ಜಾಲದಲ್ಲಿ ಈ ಕುಟುಂಬ ಪ್ರಮುಖ ಪಾತ್ರ ವಹಿಸಿತ್ತು.
ಇದನ್ನು ಓದಿ: ಗಲ್ಲು ಶಿಕ್ಷೆ ಹೇಗೆ ಜಾರಿಯಾಗುತ್ತದೆ? ಆ ಪ್ರಕೃತಿಯೇಕೆ ಮುಂಜಾನೆ ನಡೆಯುತ್ತೆ? ಅಂತಿಮ ಪ್ರಕ್ರಿಯೆಯ ಸಂಪೂರ್ಣ ವಿವರ..!
ಇದನ್ನು ಓದಿ: ಗರ್ಭಿಣಿ ಸೊಸೆ ಕೊಲೆ ಪ್ರಕರಣ: ಆಸ್ತಿ ಲಾಲಸೆಯೇ ಭೀಕರ ಕೃತ್ಯಕ್ಕೆ ಕಾರಣ, ವಿಚಾರಣೆಯಲ್ಲಿ ಆರೋಪಿ ಬಾಯ್ಬಿಟ್ಟ ಸತ್ಯ
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದಂತೆ, ಮಿಂಗ್ ಕುಟುಂಬವು ಹಲವು ವರ್ಷಗಳಿಂದ ಕೊಲೆ, ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ, ಮಾದಕವಸ್ತುಗಳ ಅಕ್ರಮ ವ್ಯಾಪಾರ ಮತ್ತು ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡಿತ್ತು. 2017ರಿಂದ ಮ್ಯಾನ್ಮಾರ್ ಪ್ರದೇಶದಲ್ಲಿ ಹಲವು ನೆಲೆಗಳನ್ನು ಸ್ಥಾಪಿಸಿ ಅಕ್ರಮ ಕ್ಯಾಸಿನೊಗಳನ್ನೂ ನಡೆಸುತ್ತಿದ್ದುದಾಗಿ ವರದಿಯಾಗಿದೆ.
ವಿದೇಶಗಳಿಂದ ಉದ್ಯೋಗದ ಆಮಿಷವೊಡ್ಡಿ ಕರೆತಂದವರನ್ನು ಬಲವಂತವಾಗಿ ಬಂಧಿಸಲಾಗುತ್ತಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದವರಿಗೆ ಭೀಕರ ಹಿಂಸೆ ನೀಡಲಾಗುತ್ತಿತ್ತು ಎಂಬ ಆರೋಪಗಳಿವೆ. ಕೆಲವರ ಉಗುರುಗಳನ್ನು ಎಳೆದು ತೆಗೆದು ಕೊಲ್ಲಲಾಗುತ್ತಿತ್ತು ಎಂದು ಬಲಿಪಶುಗಳ ಕುಟುಂಬಗಳು ದೂರಿವೆ. ಈ ಪ್ರಕರಣದಲ್ಲಿ ಹೆಚ್ಚಿನ ಬಲಿಪಶುಗಳು ಚೀನಾದ ನಾಗರಿಕರಾಗಿದ್ದರು ಎಂಬುದು ತಿಳಿದುಬಂದಿದೆ.
ಎರಡು ವರ್ಷಗಳ ಹಿಂದೆ ಲಾವೊಕೈ ಪ್ರದೇಶದಲ್ಲಿದ್ದ ಇವರ ನೆಲೆಗಳ ಮೇಲೆ ಬಂಡಾಯ ಗುಂಪುಗಳು ದಾಳಿ ನಡೆಸಿದಾಗ, ಮಿಂಗ್ ಕುಟುಂಬದ ಮುಖ್ಯಸ್ಥ ಮೃತಪಟ್ಟಿದ್ದರು. ಆ ಬಳಿಕ ಉಳಿದ ಆರೋಪಿಗಳನ್ನು ಚೀನಾ ಪೊಲೀಸರು ಬಂಧಿಸಿ, ಮಧ್ಯಂತರ ಪೀಪಲ್ಸ್ ಕೋರ್ಟ್ ಮೂಲಕ ಪ್ರಕರಣದ ತನಿಖೆ ನಡೆಸಲಾಯಿತು.
ಚೀನಾ ಸುಪ್ರೀಂ ಕೋರ್ಟ್ ತೀರ್ಪಿನಂತೆ, 11 ಮಂದಿಗೆ ಮರಣದಂಡನೆ, ಐದು ಮಂದಿಗೆ ಎರಡು ವರ್ಷಗಳ ಕಾಲಾವಕಾಶದೊಂದಿಗೆ ಮರಣದಂಡನೆ ಹಾಗೂ ಇನ್ನೂ 12 ಮಂದಿಗೆ ಗರಿಷ್ಠ 24 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಒಮ್ಮೆ ಬಡ ಗಡಿ ಪ್ರದೇಶವಾಗಿದ್ದ ಕೊಕಾಂಗ್, ಮಿಂಗ್ ಕುಟುಂಬದ ಅಕ್ರಮ ಚಟುವಟಿಕೆಗಳಿಂದ ಶತಕೋಟಿ ಡಾಲರ್ ಹಗರಣಗಳ ಕೇಂದ್ರವಾಗಿತ್ತು ಎಂದು ನ್ಯಾಯಾಲಯ ಹೇಳಿದೆ.






