ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತರ ಇದೀಗ ಚೀನಾವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸೈನಿಕ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ತಾವು ಪ್ರಮುಖ ಪಾತ್ರ ವಹಿಸಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಈ ಹೇಳಿಕೆಯನ್ನು ಭಾರತ ತೀವ್ರವಾಗಿ ತಿರಸ್ಕರಿಸಿದ್ದು, ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೀಜಿಂಗ್, ಡಿಸೆಂಬರ್ 31: ಭಾರತ–ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅಮೆರಿಕದ ಬಳಿಕ ಚೀನಾವೂ ಕ್ರೆಡಿಟ್ ಪಡೆಯಲು ಮುಂದಾಗಿದೆ. ಮಂಗಳವಾರ ಬೀಜಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ವಿಶ್ವದ ಹಲವು ಸಂಘರ್ಷಗಳನ್ನು ಪರಿಹರಿಸಲು ಚೀನಾ ಸಹಾಯ ಮಾಡುತ್ತಿದೆ ಎಂದು ಹೇಳುತ್ತಾ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ವೇಳೆ ಚೀನಾ ಮಧ್ಯಸ್ಥಿಕೆ ವಹಿಸಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಡೊನಾಲ್ಡ್ ಟ್ರಂಪ್‌ನಂತೆಯೇ, ಚೀನಾದ ಈ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ ವರ್ಷದ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೈನಿಕ ಮುಖಾಮುಖಿಯ ಸಮಯದಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿತ್ತು ಎಂಬ ಆರೋಪವನ್ನು ಭಾರತ ಸಂಪೂರ್ಣವಾಗಿ ತಳ್ಳಿಹಾಕಿದೆ. ಆಪರೇಷನ್ ಸಿಂಧೂರ್ ನಂತರ ಜಾರಿಗೊಂಡ ಭಾರತ–ಪಾಕಿಸ್ತಾನ ಕದನ ವಿರಾಮ ಒಪ್ಪಂದದಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ದೇಶ ಭಾಗಿಯಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಯುದ್ಧವನ್ನು ಕೊನೆಗೊಳಿಸುವಲ್ಲಿ ಯಾವುದೇ ವಿದೇಶಿ ರಾಷ್ಟ್ರಗಳು ಪಾತ್ರವಹಿಸಿಲ್ಲ ಎಂದು ಭಾರತ ಸರ್ಕಾರ ಪುನರುಚ್ಚರಿಸಿದೆ. ಪಾಕಿಸ್ತಾನವೇ ಕದನ ವಿರಾಮಕ್ಕಾಗಿ ಮನವಿ ಮಾಡಿಕೊಂಡಿದ್ದು, ನಂತರ ಭಾರತ ಹೋರಾಟವನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿತ್ತು ಎಂದು ಭಾರತ ಈ ಹಿಂದೆ ತಿಳಿಸಿತ್ತು.
ಗಮನಾರ್ಹವಾಗಿ, ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದಲ್ಲಿನ ಹಲವಾರು ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿತ್ತು. ಈ ದಾಳಿಯಲ್ಲಿ ಒಟ್ಟು 11 ವಾಯುನೆಲೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿತ್ತು. ಆ ದಾಳಿಯಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು.
ಆಪರೇಷನ್ ಸಿಂಧೂರ್ ವೇಳೆ ಭಾರತ–ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿಲ್ಲ ಎಂಬುದನ್ನು ಭಾರತ ಸರ್ಕಾರ ಆರಂಭದಿಂದಲೂ ಸ್ಪಷ್ಟವಾಗಿ ಹೇಳುತ್ತಲೇ ಬಂದಿದೆ. ಈ ವಿಷಯದಲ್ಲಿ ಸಂಸತ್ತಿನಲ್ಲಿಯೂ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಟ್ರಂಪ್ ಈ ವಿಷಯಕ್ಕೆ ಕ್ರೆಡಿಟ್ ಪಡೆಯಲು ಪ್ರಯತ್ನಿಸಿದಾಗಲೂ, ಯುದ್ಧ ನಿಲ್ಲಲು ಯಾವುದೇ ವಿದೇಶಿ ಹಸ್ತಕ್ಷೇಪ ಕಾರಣವಾಗಿಲ್ಲ ಎಂದು ಭಾರತ ಸರ್ಕಾರ ಖಡಕ್ ನಿಲುವು ತಾಳಿತ್ತು.
ಆಪರೇಷನ್ ಸಿಂಧೂರ್ ನಂತರ ಯಾವುದೇ ಮಧ್ಯಸ್ಥಿಕೆ ನಡೆದಿಲ್ಲ ಮತ್ತು ಭಾರತೀಯ ಸೇನೆಯ ಕ್ರಮದ ಬಳಿಕ ಪಾಕಿಸ್ತಾನವೇ ಸ್ವತಃ ಕದನ ವಿರಾಮಕ್ಕೆ ಒತ್ತಾಯಿಸಿತು ಎಂದು ಭಾರತ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.






