ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ 2019 ರಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ಸಿಕ್ಕಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಂದು ಬಾವಿಗೆ ಎಸೆದಿದ್ದ ಆರೋಪಿ ಭರತೇಶ ಮಿರ್ಜಿಗೆ ನ್ಯಾಯಾಧೀಶೆ ಸಿ.ಎಂ ಪುಷ್ಪಲತಾ ಗಲ್ಲು ಶಿಕ್ಷೆ ವಿಧಿಸಿದ್ದಾರೆ.
ಕುಡಚಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಸದ್ಯ ಅಥಣಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಕ್ಷೆಯ ಘೋಷಣೆಯ ಬಳಿಕ ಪರಮಾನಂದವಾಡಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ‘ಮಿಡಿದ ಮನಗಳ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇದಿಕೆಯಲ್ಲಿ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಭಾಷಣ ಮಾಡುವಾಗ ಭಾವುಕರಾದ ಪಿಎಸ್‌ಐ ಗಿರಿಮಲ್ಲಪ್ಪ ಅವರು ಬಿಕ್ಕಿಬಿಕ್ಕಿ ಅತ್ತರು. ಅಂದು ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ಕ್ರೂರತನ ನೆನದು ಕಣ್ಣೀರಾಕಿದರು. ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಕೋಪ ಮತ್ತು ದುಃಖವನ್ನು ಮೂಡಿಸಿತ್ತು, ಆದರೆ ಇಂದಿನ ತೀರ್ಪು ನ್ಯಾಯದ ಗೆಲುವಿನ ಸಂಕೇತವಾಗಿದೆ.






