---Advertisement---

ಪ್ರಯಾಣಿಕರ ತೊಂದರೆ ಹಿನ್ನೆಲೆ: ಇಂಡಿಗೋಗೆ 458 ಕೋಟಿ ರೂ. ಜಿಎಸ್‌ಟಿ ನೋಟಿಸ್‌ ಜಾರಿ ಮಾಡಿದ ಕೇಂದ್ರ ಸರ್ಕಾರ

On: December 31, 2025 11:19 AM
Follow Us:
---Advertisement---

ನವದೆಹಲಿ (ಡಿ.31): ಇತ್ತೀಚೆಗೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ದೀರ್ಘ ಕಾಲ ಕಾಯುವಂತೆ ಮಾಡಿ ಟೀಕೆಗೆ ಗುರಿಯಾಗಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್‌ ನೀಡಿದೆ. ತೆರಿಗೆ ಅಧಿಕಾರಿಗಳು ಇಂಡಿಗೋಗೆ 458 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಜಿಎಸ್‌ಟಿ ನೋಟಿಸ್‌ ಜಾರಿ ಮಾಡಿದ್ದಾರೆ.

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ಮಂಗಳವಾರ ಈ ವಿಚಾರವನ್ನು ನಿಯಂತ್ರಕ ಫೈಲಿಂಗ್ ಮೂಲಕ ಬಹಿರಂಗಪಡಿಸಿದೆ. ಸಿಜಿಎಸ್‌ಟಿ ದೆಹಲಿ ದಕ್ಷಿಣ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತರು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017ರ ಸೆಕ್ಷನ್‌ 74 ಅಡಿಯಲ್ಲಿ ಈ ದಂಡ ವಿಧಿಸಿದ್ದಾರೆ. ಈ ಆದೇಶವು 2018–19ರಿಂದ 2022–23ರ ಹಣಕಾಸು ವರ್ಷಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದೆ. ಒಟ್ಟು ಜಿಎಸ್‌ಟಿ ಬೇಡಿಕೆ ಮೊತ್ತ 458,26,16,980 ರೂ.ಗಳಾಗಿದೆ.

ವಿದೇಶಿ ಪೂರೈಕೆದಾರರಿಂದ ಪಡೆದ ಪರಿಹಾರ ಮೊತ್ತದ ಮೇಲೆ ಬಡ್ಡಿ ಹಾಗೂ ದಂಡದೊಂದಿಗೆ ಜಿಎಸ್‌ಟಿ ವಿಧಿಸಲಾಗಿದ್ದು, ಇನ್‌ಪುಟ್ ತೆರಿಗೆ ಕ್ರೆಡಿಟ್ ನಿರಾಕರಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಆದರೆ, ಈ ಆದೇಶ ಕಾನೂನುಬದ್ಧವಾಗಿಲ್ಲ ಮತ್ತು ತಪ್ಪಾಗಿದೆ ಎಂದು ಕಂಪನಿ ಬಲವಾಗಿ ನಂಬಿದ್ದು, ಬಾಹ್ಯ ತೆರಿಗೆ ತಜ್ಞರ ಸಲಹೆಯೊಂದಿಗೆ ಅದನ್ನು ಪ್ರಶ್ನಿಸುವುದಾಗಿ ಸ್ಪಷ್ಟಪಡಿಸಿದೆ.

ಈ ಕುರಿತು ಇಂಡಿಗೋ ಸೂಕ್ತ ಕಾನೂನು ಪರಿಹಾರಗಳನ್ನು ಪಡೆದುಕೊಳ್ಳಲಿದ್ದು, ಇದೇ ರೀತಿಯ ವಿಚಾರದಲ್ಲಿ 2017–18ನೇ ಹಣಕಾಸು ವರ್ಷದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆಯುಕ್ತರ (ಮೇಲ್ಮನವಿ) ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಆದೇಶದಿಂದ ಕಂಪನಿಯ ಹಣಕಾಸು ಸ್ಥಿತಿ ಅಥವಾ ಕಾರ್ಯಾಚರಣೆಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಉಂಟಾಗುವುದಿಲ್ಲ ಎಂದು ಇಂಡಿಗೋ ಹೇಳಿದೆ.

ಇದಲ್ಲದೆ, ಲಕ್ನೋದ ಜಂಟಿ ಆಯುಕ್ತರ ಕಚೇರಿ 2021–22ರ ಅವಧಿಗೆ ಸಂಬಂಧಿಸಿದಂತೆ ಇಂಡಿಗೋಗೆ 14.59 ಲಕ್ಷ ರೂ.ಗಳ ಜಿಎಸ್‌ಟಿ ದಂಡ ವಿಧಿಸಿದೆ. ಈ ಆದೇಶವೂ ತಪ್ಪಾಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದ್ದು, ಇದಕ್ಕೂ ಕಾನೂನು ಹೋರಾಟ ನಡೆಸುವುದಾಗಿ ಇಂಡಿಗೋದ ಪೋಷಕ ಸಂಸ್ಥೆ ಇಂಟರ್‌ಗ್ಲೋಬ್ ಏವಿಯೇಷನ್ ಮತ್ತೊಂದು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

Join WhatsApp

Join Now

RELATED POSTS