ಬ್ರೇಕ್ ಅಪ್ ಬಳಿಕ ಸೇಡು ತೀರಿಸಿಕೊಂಡ ಅನೇಕ ಪ್ರಕರಣಗಳು ಕೇಳಿಬಂದಿದ್ದರೂ, ಇತ್ತೀಚೆಗೆ ನಡೆದ ಈ ಘಟನೆ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ಪ್ರೀತಿಯಲ್ಲಿದ್ದ ಜೋಡಿ ದೂರವಾದ ನಂತರ, ಯುವಕ ಮತ್ತೊಂದು ಮದುವೆಯಾಗಿದ್ದಾನೆ. ಆದರೆ ಈ ವಿಷಯವನ್ನು ಯುವತಿ ಒಪ್ಪಿಕೊಳ್ಳಲಾಗದೆ, ವರ್ಷಗಳ ಕಾಲ ಮನಸ್ಸಿನಲ್ಲಿ ಸೇಡು ಬೆಳೆಸಿಕೊಂಡು ಕೊನೆಗೆ ಭೀಕರ ಕೃತ್ಯಕ್ಕೆ ಕೈಹಾಕಿದ್ದಾಳೆ.
ಆಕೆಯ ಸೇಡು ಮಾಜಿ ಗೆಳೆಯನ ಪತ್ನಿಯ ಮೇಲೆ ಅಪಘಾತ ಹಾಗೂ ಎಚ್ಐವಿ ರಕ್ತ ಇಂಜೆಕ್ಷನ್ ಮಾಡುವ ಮಟ್ಟಕ್ಕೆ ಹೋಗಿದ್ದು, ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ 34 ವರ್ಷದ ಬೋಯಾ ವಸುಂದರ, 40 ವರ್ಷದ ಕೊಂಗೆ ಜ್ಯೋತಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ: ಮೊದಲ ಹೆಂಡ್ತಿ ನನ್ನ ಕಸಿನ್, 2ನೆಯವ್ಳು ರಾಂಗ ನಂಬರ್, 3ನೇ ಹೆಂಡತಿ ಅವಳ ಫ್ರೆಂಡ್, ಕೋಪ ಬಂದಾಗ 4ನೆ..!
ಇದನ್ನು ಓದಿ: ಚಿಕ್ಕಬಳ್ಳಾಪುರ: ಅಣ್ಣ–ತಂಗಿಯ ಪವಿತ್ರ ಸಂಬಂಧಕ್ಕೆ ಧಕ್ಕೆ: ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದ 21 ವರ್ಷದ ಯುವತಿ ನೇಣಿಗೆ ಶರಣು
ಆರೋಪಿಗಳೆಲ್ಲರೂ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ಗಳು ಎನ್ನುವುದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ವ್ಯವಸ್ಥಿತವಾಗಿ ಪ್ಲಾನ್ ರೂಪಿಸಿಕೊಂಡು, ಹಂತ ಹಂತವಾಗಿ ಕೃತ್ಯ ಎಸಗಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಸುಂದರ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲೇ ಪ್ರೀತಿ ಆರಂಭವಾಗಿತ್ತು. ಆದರೆ ಸಂಬಂಧದಲ್ಲಿ ಉಂಟಾದ ಬಿರುಕುಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡರು. ನಂತರ ಆ ಯುವಕ ವೈದ್ಯೆಯೊಬ್ಬಳನ್ನು ಮದುವೆಯಾದನು. ಈ ಮದುವೆಯನ್ನು ವಸುಂದರ ಒಪ್ಪಿಕೊಳ್ಳಲಾಗದೆ, ವರ್ಷಗಳೇ ಕಳೆದರೂ ಮನಸ್ಸಿನಲ್ಲಿ ಆಕ್ರೋಶ ಮತ್ತು ಸೇಡು ಮಾತ್ರ ಉಳಿದುಕೊಂಡಿತ್ತು. ಮಾಜಿ ಗೆಳೆಯನನ್ನು ಹೇಗಾದರೂ ಮಾಡಿ ಮತ್ತೆ ತನ್ನ ಜೀವನಕ್ಕೆ ಕರೆತರಬೇಕು ಎಂಬ ಉದ್ದೇಶದಿಂದ ಹಲವು ಪ್ರಯತ್ನಗಳನ್ನು ನಡೆಸಿದ್ದಾಳೆ.
ಮಾಜಿ ಗೆಳೆಯ ಮತ್ತು ಆತನ ಪತ್ನಿಯ ನಡುವೆ ಬಿರುಕು ಮೂಡಿಸಲು ವಸುಂದರ ಸಾಕಷ್ಟು ಯತ್ನಿಸಿದ್ದಾಳೆ. ಆದರೆ ಯಾವುದೇ ಪ್ರಯತ್ನವೂ ಫಲ ನೀಡದ ಕಾರಣ, ಕೊನೆಗೆ ಭೀಕರ ಪ್ಲಾನ್ ರೂಪಿಸಿಕೊಂಡಿದ್ದಾಳೆ. ಈ ಹೊಸ ಸಂಚಿನಲ್ಲಿ ತನ್ನ ಸಹೋದ್ಯೋಗಿ ನರ್ಸ್ ಜ್ಯೋತಿ ಹಾಗೂ ಇನ್ನಿಬ್ಬರನ್ನು ಸೇರಿಸಿಕೊಂಡಿದ್ದಾಳೆ. ಮಾಜಿ ಗೆಳೆಯನ ಪತ್ನಿ ವೈದ್ಯೆಯಾಗಿರುವುದನ್ನು ದುರುಪಯೋಗಪಡಿಸಿಕೊಂಡು, ಆಕೆಯ ವಿರುದ್ಧ ಅಪಘಾತದ ಸಂಚು ರೂಪಿಸಲಾಗಿದೆ.
ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಆ ವೈದ್ಯೆಗೆ ಉದ್ದೇಶಪೂರ್ವಕವಾಗಿ ಅಪಘಾತ ಮಾಡಲಾಗಿದೆ. ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವೈದ್ಯೆಗೆ ಸಹಾಯ ಮಾಡುವ ನೆಪದಲ್ಲಿ ವಸುಂದರ ಮತ್ತು ಜ್ಯೋತಿ ಸ್ಥಳಕ್ಕೆ ಬಂದಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಂದ ಸಂಗ್ರಹಿಸಿದ್ದ ಎಚ್ಐವಿ ರಕ್ತದ ಸ್ಯಾಂಪಲ್ ಅನ್ನು ಮುಂಚೆಯೇ ಕಳ್ಳತನ ಮಾಡಿದ್ದ ವಸುಂದರ, ಆ ರಕ್ತವನ್ನು ಸಿರಿಂಜ್ ಮೂಲಕ ಗಾಯಗೊಂಡ ವೈದ್ಯೆಯ ದೇಹಕ್ಕೆ ಇಂಜೆಕ್ಟ್ ಮಾಡಿದ್ದಾಳೆ. ಬಳಿಕ ಯಾವುದೇ ಅನುಮಾನ ಮೂಡದಂತೆ ಇಬ್ಬರೂ ಅಲ್ಲಿಂದ ತೆರಳಿದ್ದಾರೆ.
ಇತರರ ಸಹಾಯದಿಂದ ಗಾಯಗೊಂಡ ವೈದ್ಯೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅನುಮಾನಗೊಂಡ ವೈದ್ಯೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಕ್ತ ಪರೀಕ್ಷೆ ನಡೆಸಿದಾಗ, ಎಚ್ಐವಿ ಸೋಂಕು ಇಂಜೆಕ್ಟ್ ಮಾಡಿರುವುದು ದೃಢಪಟ್ಟಿದೆ. ತನಿಖೆ ವೇಳೆ ಸ್ಥಳದಲ್ಲಿ ಬಳಸಿದ ಸಿರಿಂಜ್ ಹಾಗೂ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ನಿಂದ ಎಚ್ಐವಿ ಸ್ಯಾಂಪಲ್ ಕಳವು ಮಾಡಿರುವುದು ಪತ್ತೆಯಾಗಿದೆ.
ಈ ಘಟನೆ ಬಳಿಕ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಇತ್ತ ಗಾಯಗೊಂಡ ವೈದ್ಯೆ ದೈಹಿಕ ನೋವಿನ ಜೊತೆಗೆ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದಾರೆ. ಅಪಘಾತದ ಗಾಯಗಳ ನಡುವೆಯೇ ರಕ್ತದಲ್ಲಿ ಎಚ್ಐವಿ ಸೋಂಕು ಸೇರಿಕೊಂಡಿರುವ ಸತ್ಯ, ಆಕೆಯ ಕುಟುಂಬವನ್ನೇ ಆಘಾತಕ್ಕೆ ತಳ್ಳಿದ್ದು, ಇಡೀ ಪ್ರಕರಣ ಸಮಾಜವನ್ನು ಕಂಗಾಲಾಗುವಂತೆ ಮಾಡಿದೆ.






