ಕಲಬುರಗಿ, ಡಿ.20: ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದ ಬಳಿ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನಂದಿಕೂರ ಗ್ರಾಮದ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ ಬಿರಾದಾರ್ ಅವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಮಯದಲ್ಲಿ ಮಲ್ಲಿನಾಥ ಬಿರಾದಾರ್ ಮನೆಯಲ್ಲಿ ಇರಲಿಲ್ಲ. ಅವರ ಪತ್ನಿ ಹಾಗೂ ಮೂವರು ಮಕ್ಕಳು ಮನೆಯಲ್ಲಿದ್ದರು. ಜ್ಯೋತಿ ಪಾಟೀಲ್ ಬಾಗಿಲು ತಟ್ಟಿದ ವೇಳೆ ಬಾಗಿಲು ತೆರೆಯುತ್ತಿದ್ದಂತೆಯೇ ತಾವು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.
ಜ್ಯೋತಿ ಪಾಟೀಲ್ ಅವರು ಕಲಬುರಗಿಯ ಬ್ರಹ್ಮಪುರ ಬಡಾವಣೆಯ ನಿವಾಸಿಯಾಗಿದ್ದು, ಮಲ್ಲಿನಾಥ ಬಿರಾದಾರ್ ಅವರೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






