ಅಮೆರಿಕದ ತೆರಿಗೆ ಸಂಕಷ್ಟ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿರುವ ಹೊತ್ತಿನಲ್ಲಿ, ಆ.31 ಮತ್ತು ಸೆ.1ರಂದು ನಡೆಯುವ ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ ಶೃಂಗದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಯಾನ್‌ಜಿನ್‌ಗೆ ಭೇಟಿ ನೀಡಿದರು.
2020ರ ಗಲ್ವಾನ್ ಗಡಿ ಘಟನೆ ನಂತರದ ಮತ್ತು 7 ವರ್ಷಗಳ ಬಳಿಕದ ಈ ಮೊದಲ ಚೀನಾ ಭೇಟಿ ಐತಿಹಾಸಿಕ ಘಟ್ಟವೆಂದೇ ಪರಿಗಣಿಸಲಾಗಿದೆ. ಜಗತ್ತಿನಾದ್ಯಂತ ಈ ಪ್ರವಾಸಕ್ಕೆ ವಿಶೇಷ ಗಮನ ಹರಿಸಲಾಗಿದೆ. ಶನಿವಾರ ಜಪಾನ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಮೋದಿ ಅವರು ಅಲ್ಲಿಂದ ನೇರವಾಗಿ ಸಂಜೆ ಚೀನಾಗೆ ಆಗಮಿಸಿದರು. ಅವರನ್ನು ಭಾರತೀಯ ಶೈಲಿಯಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು.
ಭಾನುವಾರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ನಡೆಯಲಿರುವ ಸಭೆಯಲ್ಲಿ, ಭಾರತ–ಚೀನಾ ಆರ್ಥಿಕ ಸಂಬಂಧಗಳ ಬಲವರ್ಧನೆ ಹಾಗೂ ಗಲ್ವಾನ್ ಗಡಿ ಸಂಘರ್ಷದ ಬಳಿಕದ ಬಿಕ್ಕಟ್ಟು ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಶೃಂಗಸಭೆಯ ವೇಳೆ ಪ್ರಧಾನಿ ಮೋದಿ, ವ್ಲಾದಿಮಿರ್ ಪುಟಿನ್ ಸೇರಿ ಹಲವು ವಿಶ್ವ ನಾಯಕರನ್ನು ಭೇಟಿಯಾಗಲಿದ್ದು, ಉಕ್ರೇನ್–ರಷ್ಯಾ ಯುದ್ಧ ಶಮನ ಹಾಗೂ ಭಾರತ–ರಷ್ಯಾ ನಡುವಿನ ವ್ಯಾಪಾರ ಸಹಕಾರ ವಿಸ್ತರಣೆ ಕುರಿತು ಚರ್ಚೆ ನಡೆಯಲಿದೆ.
ಚೀನಾ ಭೇಟಿಗೂ ಮುನ್ನ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ‘ವಿಶ್ವ ಆರ್ಥಿಕತೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಭಾರತ ಮತ್ತು ಚೀನಾ ಜತೆಯಾಗಿ ಕೆಲಸ ಮಾಡುವ ಅಗತ್ಯವಿದೆ” ಎಂದು ಮೋದಿ ಪೋಸ್ಟ್ ಹಾಕಿದ್ದಾರೆ.
ಈ ಬಾರಿ ನಡೆಯುತ್ತಿರುವ ಎಸ್‌ಸಿಒ ಶೃಂಗವನ್ನು ಚೀನಾ ತನ್ನ ಪ್ರಾಬಲ್ಯ ತೋರಿಸುವ ವೇದಿಕೆಯಾಗಿಸಿಕೊಳ್ಳುತ್ತಿದ್ದರೆ, ಮೋದಿ, ಕ್ಸಿ ಜಿನ್‌ಪಿಂಗ್ ಮತ್ತು ವ್ಲಾದಿಮಿರ್ ಪುಟಿನ್ ಒಂದೇ ವೇದಿಕೆಯಲ್ಲಿ ಭಾಗವಹಿಸುತ್ತಿರುವುದು ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ. ಅಮೆರಿಕದ ತೆರಿಗೆ ಸುಂಕದ ಪರಿಣಾಮ ಶೃಂಗಸಭೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಮೋದಿ ಅವರು ಹಿಂದಿನ ಬಾರಿ 2018ರ ಜೂನ್‌ನಲ್ಲಿ ಎಸ್‌ಸಿಒ ಶೃಂಗಕ್ಕಾಗಿ ಚೀನಾಗೆ ತೆರಳಿದ್ದರು. ನಂತರ 2020ರ ಗಲ್ವಾನ್ ಘಟನೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ಪರಿಣಾಮ ಭಾರತ–ಚೀನಾ ಸಂಬಂಧ ಹದಗೆಟ್ಟಿದ್ದು, ಪ್ರಧಾನಿ ಚೀನಾ ಪ್ರವಾಸ ಕೈಗೊಂಡಿರಲಿಲ್ಲ.
2019ರ ಗಲ್ವಾನ್ ಸಂಘರ್ಷದ ಬಳಿಕ ಭಾರತ- ಚೀನಾ ಸಂಬಂಧ ಪೂರ್ಣ ಹಳಸಿತ್ತು. ಪರಿಸ್ಥಿತಿ ಯುದ್ಧದವರೆಗೂ ತಲುಪಿತ್ತು. ಬಳಿಕ ಉಭಯ ದೇಶಗಳು ನೇರ ವಿಮಾನ, ಪ್ರವಾಸಿ ವೀಸಾ ವಿತರಣೆ ಸ್ಥಗಿತಗೊಳಿಸಿದ್ದವು.
ಅಮೆರಿಕದ ವಿರುದ್ಧ ನೀತಿಗಳು ಜಾರಿ
ರಷ್ಯಾ ಮತ್ತು ಅಮೆರಿಕದ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಹಾಳಾಗಿದ್ದು, ಭಾರತ ಮತ್ತು ಚೀನದ ಜತೆಗೂ ಕೊಂಚ ಹದತಪ್ಪಿದೆ. ಇಂತಹ ಸಮಯದಲ್ಲಿ ಈ 3 ರಾಷ್ಟ್ರಗಳ ನಾಯಕರು ಪರಸ್ಪರ ಭೇಟಿಯಾಗುತ್ತಿರುವುದರಿಂದ, ಅಮೆರಿಕದ ನೀತಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವ ಒಪ್ಪಂದಗಳಾಗುವ ಸಾಧ್ಯತೆ ದಟ್ಟವಾಗಿವೆ. ರಷ್ಯಾ, ಭಾರತ ಮತ್ತು ಚೀನಾಗಳ ಮೇಲೆ ಟ್ರಂಪ್ ವಿಧಿಸಿರುವ ಸುಂಕದಿಂದ ಜಾಗತಿಕ ಮಾರುಕಟ್ಟೆ ಕುಸಿತ ಕಂಡಿತ್ತು. ಹೀಗಾಗಿ ಇದನ್ನು ಮೇಲೆತ್ತುವ ಮೂಲಕ ಇತರ ರಾಷ್ಟ್ರಗಳ ಬೆಂಬಲವನ್ನು ಪಡೆದುಕೊಳ್ಳುವ ಅವಕಾಶವೂ ಸಹ ಈ ರಾಷ್ಟ್ರಗಳ ಮುಂದಿವೆ. ಒಟ್ಟಿನಲ್ಲಿ ಭಾರತ-ರಷ್ಯಾ-ಚೀನಾದ “ಶಕ್ತಿ’ ಪ್ರದರ್ಶನವು ಇಡೀ ಜಗತ್ತಿನ ಗಮನ ಸೆಳೆದಿದೆ.
ಮೋದಿಗೆ ಕೆಂಪು ಹಾಸಿನ ಅದ್ದೂರಿ ಸ್ವಾಗತ
ಜಪಾನ್ ಪ್ರವಾಸ ಮುಗಿಸಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಚೀನದ ತಿಯಾಂಜಿನ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. 7 ವರ್ಷಗಳ ಬಳಿಕ ಮೋದಿಯವರ ಮೊದಲ ಚೀನ ಪ್ರವಾಸ ಇದಾಗಿದ್ದು, ಅವರಿಗೆ ಕೆಂಪುಹಾಸು ಹಾಕಿ, ನೃತ್ಯದ ಮೂಲಕ ಚೀನವು ಅದ್ದೂರಿ ಸ್ವಾಗತ ನೀಡಿತು.






