ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ 85ನೇ ದಿನಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಇಬ್ಬರೂ ಎಲಿಮಿನೇಟ್ ಆಗಿದ್ದಾರೆ. ಮೊದಲಿಗೆ ಅತಿಥಿಗಳಾಗಿ ಬಿಗ್‌ಬಾಸ್ ಮನೆಗೆ ತ್ರಿವಿಕ್ರಮ್, ಚೈತ್ರಾ ಕುಂದಾಪುರ, ರಜತ್ ಕಿಶನ್, ಮೋಕ್ಷಿತಾ ಪೈ ಹಾಗೂ ಉಗ್ರಂ ಮಂಜು ಪ್ರವೇಶಿಸಿದ್ದರು.
ಇವರಲ್ಲಿ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ತಮ್ಮ ಭೇಟಿಯನ್ನು ಮುಗಿಸಿ ಮನೆಗೆ ವಾಪಸ್ ಆಗಿದ್ದರೆ, ಚೈತ್ರಾ ಮತ್ತು ರಜತ್ ಮಾತ್ರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಯಲ್ಲೇ ಉಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.
ಇದೀಗ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಉಳಿದಿದ್ದ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಮನೆಬಿಟ್ಟು ಹೊರಗೆ ಬಂದಿದ್ದಾರೆ. ಈ ವಾರ ಯಾವುದೇ ವೋಟಿಂಗ್ ಲೈನ್ ತೆರೆಯಲಾಗಿರಲಿಲ್ಲ. ಆದರೂ ಇಬ್ಬರನ್ನೂ ಎಲಿಮಿನೇಟ್ ಮಾಡಲಾಗಿದೆ. ಈ ನಿರ್ಧಾರದ ಹಿಂದೆ ಇರುವ ಕಾರಣವನ್ನು ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ವಿವರಿಸಿದ್ದಾರೆ.
ಸ್ಪರ್ಧಿಗಳಿಗೆ ಹೊಸ ಉತ್ಸಾಹ ಮತ್ತು ಸ್ಫೂರ್ತಿ ಬರಲಿ ಎಂಬ ಉದ್ದೇಶದಿಂದಲೇ ಚೈತ್ರಾ ಮತ್ತು ರಜತ್ ಅವರನ್ನು ಮನೆಗೆ ಕರೆತರಲಾಗಿತ್ತು ಎಂದು ಸುದೀಪ್ ತಿಳಿಸಿದ್ದಾರೆ. ಆದರೆ ಅವರು ಅತಿಥಿಗಳೆಂಬ ವಿಚಾರವನ್ನು ಮನೆಯೊಳಗೆ ಇದ್ದಾಗ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ. ಅತಿಥಿಗಳೆಂಬ ಅರಿವು ಇದ್ದರೂ, ಮನೆಯೊಳಗಿನವರೊಂದಿಗೆ ಹೇಳಿಕೊಳ್ಳಲಿಲ್ಲ ಅದು ಅವರ ನಿಜವಾದ ವೃತ್ತಿಪರತೆ ಎಂದು ಹೇಳಿದ ಸುದೀಪ್, ಆದರೂ ಅವರು ಆಟವನ್ನು ಚೆನ್ನಾಗಿ ಆಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಇಂತಹ ಅವಕಾಶಗಳು ಬಹಳ ಅಪರೂಪವಾದವು ಎಂದು ಹೇಳಿ, ಅವಕಾಶ ನೀಡಿದಕ್ಕಾಗಿ ಚೈತ್ರಾ ಮತ್ತು ರಜತ್ ಧನ್ಯವಾದ ಸಲ್ಲಿಸಿದ್ದಾರೆ.
ಸೀಸನ್ 12ಕ್ಕೆ ಅತಿಥಿಗಳಾಗಿ ಪ್ರವೇಶಿಸಿ ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಉಳಿದಿದ್ದ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಮೂರು ವಾರಗಳ ಕಾಲ ಮನೆಯೊಳಗೆ ಇದ್ದ ಬಳಿಕ ಇದೀಗ ಹೊರಬಂದಿದ್ದಾರೆ. ಮನೆಬಿಟ್ಟು ಹೊರಬಂದ ಬಳಿಕ ಅವರು ತಮ್ಮ ಎರಡನೇ ಬಿಗ್‌ಬಾಸ್ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಮನೆಯೊಳಗಿನ ಸ್ಪರ್ಧಿಗಳ ಆಟ, ಯಾರು ಫೈನಲ್ ತಲುಪಬಹುದು, ಯಾರು ಟಾಪ್ 5ರಲ್ಲಿ ಇರಬಹುದು ಎಂಬುದರ ಬಗ್ಗೆ ಇಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚೈತ್ರಾ ಕುಂದಾಪುರ ಅವರು ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ ಸೇರಿದಂತೆ ಕೆಲವರನ್ನು ಫೈನಲಿಸ್ಟ್‌ಗಳ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ರಜತ್ ಕಿಶನ್ ಮಾತ್ರ ಎಲ್ಲರೂ ಉತ್ತಮವಾಗಿ ಆಡುತ್ತಿದ್ದಾರೆ, ಯಾರು ಚೆನ್ನಾಗಿ ಆಡುತ್ತಾರೋ ಅವರು ಮುಂದೆ ಬರಲಿ ಎಂದು ಜಾಣ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ. ವಿನ್ನರ್ ಆಯ್ಕೆ ಸಂಪೂರ್ಣವಾಗಿ ಜನರ ಕೈಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸಂಭಾವನೆ ಕುರಿತು ಕೇಳಿದ ಪ್ರಶ್ನೆಗೆ ರಜತ್ ಕಿಶನ್ ಸ್ಪಷ್ಟ ಸಂಖ್ಯೆಯನ್ನು ಹೇಳದೆ, ಸೀಸನ್ 11ಕ್ಕಿಂತ ಈ ಬಾರಿ ಹತ್ತು ಪಟ್ಟು ಹೆಚ್ಚು ಸಂಭಾವನೆ ದೊರೆತಿರುವುದು ನಿಜ ಎಂದು ಹೇಳಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಕಡಿಮೆ ಸಂಭಾವನೆ ಸಿಕ್ಕಿತ್ತು, ಈಗ ಅದಕ್ಕಿಂತ ಹೆಚ್ಚು ಸಿಕ್ಕಿದೆ. ತನ್ನ ಜೀವನದಲ್ಲಿ ಬಿಗ್‌ಬಾಸ್ ಪ್ರಮುಖ ಪಾತ್ರವಹಿಸಿದೆ ಎಂದು ರಜತ್ ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರು ಕೂಡ ಸಂಭಾವನೆ ವಿಚಾರದಲ್ಲಿ ಜಾಣ್ಮೆಯ ಉತ್ತರ ನೀಡಿದ್ದಾರೆ. ಕಳೆದ ಸೀಸನ್‌ನಲ್ಲಿಯೂ ಉತ್ತಮ ಸಂಭಾವನೆ ಸಿಕ್ಕಿತ್ತು. ಆದರೆ ಈ ಬಾರಿ ಅದಕ್ಕಿಂತ ಹೆಚ್ಚು ಸಿಕ್ಕಿರುವುದು ನಿಜ, ಎಷ್ಟು ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜೊತೆಗೆ, ತಮ್ಮ ಪತಿ ಉತ್ತಮವಾಗಿ ದುಡಿಯುತ್ತಾರೆ, ಆದ್ದರಿಂದ ಸಂಭಾವನೆ ವಿಷಯದಲ್ಲಿ ಹೆಚ್ಚು ಚಿಂತೆ ಇಲ್ಲ ಎಂದು ಅವರು ಹೇಳಿದ್ದಾರೆ.






