ಬಿಗ್ಬಾಸ್ ಕನ್ನಡ ಕಾರ್ಯಕ್ರಮ ಮುಕ್ತಾಯಕ್ಕೆ ಇನ್ನೇನು ಒಂದು ದಿನವೂ ಉಳಿದಿಲ್ಲ. ಸದ್ಯ ಮನೆಯೊಳಗೆ ಆರು ಮಂದಿ ಸ್ಪರ್ಧಿಗಳು ಇದ್ದು, ಅವರಲ್ಲಿ ಒಬ್ಬರು ಅಂತಿಮವಾಗಿ ವಿನ್ನರ್ ಆಗಲಿದ್ದಾರೆ. ಈಗಾಗಲೇ ಪ್ರೇಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದು, ಭಾನುವಾರ ಬೆಳಿಗ್ಗೆ 10 ಗಂಟೆಯವರೆಗೆ ವೋಟಿಂಗ್ ಅವಕಾಶ ಲಭ್ಯವಿದೆ.
ಇದನ್ನು ಓದಿ: ಬಿಗ್ ಬಾಸ್ ಕನ್ನಡ ಸೀಸನ್ 12: ಅಭೂತಪೂರ್ವ ಮತಗಳೊಂದಿಗೆ ಗಿಲ್ಲಿ ನಟ ವಿಜಯ, 50 ಲಕ್ಷ ಹಾಗೂ ಲಕ್ಸುರಿ ಕಾರು ಗೆಲುವು..!
ಇದನ್ನು ಓದಿ: BBK12 ಫಿನಾಲೆ ಹಿನ್ನಲೆ: ಜಾಲಿವುಡ್ ಸ್ಟುಡಿಯೋ ಬಳಿ ಗಿಲ್ಲಿ ಅಭಿಮಾನಿಗಳ ಅತಿರೇಕ, 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಹೆಚ್ಚು ಮತಗಳನ್ನು ಪಡೆದುಕೊಳ್ಳುವ ಸ್ಪರ್ಧಿಯನ್ನೇ ವಿಜೇತನೆಂದು ಘೋಷಿಸಲಾಗುತ್ತದೆ. ಈ ನಡುವೆ ಬಿಗ್ಬಾಸ್ ಕನ್ನಡ 12 ಒಂದು ಅಪರೂಪದ ದಾಖಲೆ ಬರೆಯುತ್ತಿರುವುದು ವಿಶೇಷ. ಈ ಸೀಸನ್ನಲ್ಲಿ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ ಸುಮಾರು 12 ಗಂಟೆಗಳ ಕಾಲಾವಕಾಶ ಇದ್ದಾಗಲೇ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಅಧಿಕ ಮತಗಳು ಬಂದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಈ ವಿಷಯವನ್ನು ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್ನಲ್ಲಿ ಬಹಿರಂಗಪಡಿಸಿದ್ದಾರೆ. 37 ಕೋಟಿ ಎಂಬ ಸಂಖ್ಯೆ ಎಷ್ಟು ದೊಡ್ಡದು ಎಂಬುದನ್ನು ವಿವರಿಸುವ ಸಲುವಾಗಿ, ಅವರು ಹಿಂದಿನ ಸೀಸನ್ಗಳೊಂದಿಗೆ ಹೋಲಿಕೆ ಕೂಡ ನೀಡಿದರು.
ಕಳೆದ ಬಿಗ್ಬಾಸ್ ಕನ್ನಡ 11ನೇ ಸೀಸನ್ನಲ್ಲಿ ವಿನ್ನರ್ ಆದ ಸ್ಪರ್ಧಿಗೆ ಒಟ್ಟು 5 ಕೋಟಿ ಮತಗಳು ಬಂದಿದ್ದವು. ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಈಗಾಗಲೇ ಅದರ ಆರು ಪಟ್ಟು ಹೆಚ್ಚು ಮತಗಳು ಸೇರ್ಪಡೆಯಾಗಿವೆ. ಇನ್ನೂ ವೋಟಿಂಗ್ ಮುಕ್ತಾಯವಾಗದಿರುವುದರಿಂದ, ಅಂತಿಮ ಸಂಖ್ಯೆಯು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬುದನ್ನೂ ಸುದೀಪ್ ಸೂಚಿಸಿದರು.
ಸ್ಪರ್ಧಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಸುದೀಪ್ ಅವರು “ಕಳೆದ ಬಾರಿ ವಿನ್ನರ್ಗೆ ಐದು ಕೋಟಿ ಮತಗಳು ಬಂದಿದ್ದರೆ, ಈ ಬಾರಿ ಎಷ್ಟು ಬಂದಿರಬಹುದು ಊಹಿಸಿ” ಎಂದು ಪ್ರಶ್ನಿಸಿದರು. ಇದಕ್ಕೆ ಗಿಲ್ಲಿ ಸೇರಿದಂತೆ ಕೆಲವರು 6 ರಿಂದ 10 ಕೋಟಿ ಎಂದು ಅಂದಾಜಿಸಿದರು. ಆದರೆ ಎಲ್ಲರ ಊಹೆಗೂ ಮೀರಿದಂತೆ, ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಳಿಗೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಅಧಿಕ ಮತಗಳು ಬಂದಿವೆ ಎಂಬ ಸತ್ಯವನ್ನು ಸುದೀಪ್ ಬಹಿರಂಗಪಡಿಸಿದರು.
ಇದಲ್ಲದೆ, 6ನೇ ಸ್ಥಾನ ಪಡೆದ ಸ್ಪರ್ಧಿಗೆ ಬಂದ ಮತಗಳ ಅಂತರವನ್ನೂ ಅವರು ವಿವರಿಸಿದರು. 11ನೇ ಸೀಸನ್ನಲ್ಲಿ 6ನೇ ಸ್ಪರ್ಧಿಗೆ 64 ಲಕ್ಷ ಮತಗಳು ಬಂದಿದ್ದರೆ, ಈ ಸೀಸನ್ನಲ್ಲಿ ವೋಟಿಂಗ್ ಮುಕ್ತಾಯಕ್ಕೂ ಮುನ್ನವೇ 94 ಲಕ್ಷ ಮತಗಳು ದಾಖಲಾಗಿವೆ. ಈ ಸಂಖ್ಯೆ ಇನ್ನೂ ಒಂದು ಕೋಟಿಯನ್ನು ದಾಟುವ ಸಾಧ್ಯತೆ ಇದೆ ಎಂಬುದು ಗಮನಾರ್ಹ.
ಮತ್ತೊಂದು ಪ್ರಮುಖ ಅಂಶವನ್ನೂ ಸುದೀಪ್ ಅವರು ಹಂಚಿಕೊಂಡರು. ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿದ್ದರೂ, ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗಳ ನಡುವಿನ ಮತಗಳ ಅಂತರ ಬಹಳ ಕಡಿಮೆ ಇದೆ ಎಂದು ತಿಳಿಸಿದರು. ಇದರಿಂದ ಈ ಬಾರಿ ಸ್ಪರ್ಧೆ ಅತ್ಯಂತ ಕಠಿಣವಾಗಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಹಾಗೆಯೇ, ಸ್ಪರ್ಧಿಗಳು ಈ ವೇದಿಕೆಯಿಂದ ಏನು ಪಡೆದುಕೊಂಡಿದ್ದಾರೆ ಎಂಬುದಕ್ಕೂ ಇದು ಸಾಕ್ಷಿ ಎಂದು ಸುದೀಪ್ ಹೇಳಿದರು. ಹಿಂದೆ ಜನ ಕಾರ್ಯಕ್ರಮವನ್ನು ಕೇವಲ ನೋಡುತ್ತಿದ್ದರು, ಆದರೆ ಈಗ ಮತ ಹಾಕುವವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಪ್ರೇಕ್ಷಕರು ಬಿಗ್ಬಾಸ್ ಅನ್ನು ತಮ್ಮ ಜೀವನದ ಭಾಗವೆಂದು ಪರಿಗಣಿಸುತ್ತಿದ್ದು, ಅವರ ಭಾಗವಹಿಸುವಿಕೆ ದಿನೇ ದಿನೇ ಹೆಚ್ಚುತ್ತಿದೆ.
ಬಿಗ್ಬಾಸ್ ವೇದಿಕೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ಭಾಗವಹಿಸುವವರನ್ನು ಹೊಸ ಅವಕಾಶಗಳತ್ತ ಕರೆದೊಯ್ಯುತ್ತಿದೆ. ಇಂತಹ ಅವಕಾಶಗಳು ಬೇರೆ ಯಾವುದೇ ರಿಯಾಲಿಟಿ ಶೋಗಳಲ್ಲಿ ಸಿಗುವುದಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದರು.
ಗಿಲ್ಲಿ, ಅಶ್ವಿನಿ, ರಕ್ಷಿತಾ, ಧನುಶ್, ಕಾವ್ಯಾ ಹಾಗೂ ರಘು ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಈಗಾಗಲೇ ತಮ್ಮ ತಮ್ಮ ಮೆಚ್ಚಿನ ಸ್ಪರ್ಧಿಗಳ ಪರವಾಗಿ ಮತ ಅಭಿಯಾನ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾ ಹಾಗೂ ವಿವಿಧ ಪ್ರದೇಶಗಳಲ್ಲಿ ಮತ ಹಾಕುವಂತೆ ಪ್ರಚಾರ ನಡೆಯುತ್ತಿದೆ. ವಿಶೇಷವಾಗಿ ಗಿಲ್ಲಿಗಾಗಿ ಹಲವು ಕಡೆಗಳಲ್ಲಿ ಅಭಿಮಾನಿಗಳು ನಡೆಸುತ್ತಿರುವ ಮತ ಅಭಿಯಾನ ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು.






