ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಶನಿವಾರ ಪತ್ತೆಯಾದ ಚಿನ್ನಾಭರಣ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. 8 ವರ್ಷದ ಪ್ರಜ್ವಲ್ ರಿತ್ತಿಯ ಮನೆ ಪಾಯ ಅಗೆಯುವ ವೇಳೆ ಪತ್ತೆಯಾದ ಚಿನ್ನದ ವಿಷಯ ಆರಂಭದಲ್ಲಿ ರಾಜರ ಕಾಲದ ನಿಧಿಯೆಂದು ಭಾವಿಸಲಾಗಿತ್ತು.
ಇದನ್ನು ಓದಿ: ಕಲಬುರಗಿ: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧ ದಂಪತಿಗೆ ₹1.30 ಕೋಟಿ ವಂಚನೆ
ಚಿನ್ನ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರು ಗ್ರಾಮಸ್ಥರು, ಪಂಚಾಯಿತಿ ಸದಸ್ಯರು, ಮಾಜಿ ಡಿ.ಪಿ. ಅಧ್ಯಕ್ಷ ಸಿದ್ದು ಪಾಟೀಲ್ ಹಾಗೂ ಗದಗ ಜಿಲ್ಲಾಧಿಕಾರಿ ಹೆಚ್.ಕೆ. ಪಾಟೀಲ್ ಅವರಿಗೆ ಮಾಹಿತಿ ನೀಡಿದ್ದರು. ಜಿಲ್ಲಾಡಳಿತದ ಸೂಚನೆಯಂತೆ ಚಿನ್ನವನ್ನು ಪ್ರಾರಂಭದಲ್ಲಿ ಸರ್ಕಾರದ ವಶಕ್ಕೆ ಒಪ್ಪಿಸಲಾಗಿತ್ತು.
ಆದರೆ ಮನೆ ನಿರ್ಮಾಣ ಇನ್ನೂ ಪೂರ್ಣಗೊಳ್ಳದೇ ತಾಯಿ ಮತ್ತು ಮಗುವಿಗೆ ವಾಸಸ್ಥಳವಿಲ್ಲದ ಸ್ಥಿತಿ ಎದುರಾಗಿದ್ದು, ಕುಟುಂಬವು ಮಾನವೀಯ ನೆರವಿಗೆ ಮನವಿ ಮಾಡಿದೆ.
ಈ ನಡುವೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧೀಕ್ಷಕ ರಮೇಶ್ ಮೂಲಿಮನಿ ಸ್ಥಳ ಪರಿಶೀಲನೆ ನಡೆಸಿದ ನಂತರ ಸ್ಪಷ್ಟನೆ ನೀಡಿದ್ದು, “ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನ ನಿಧಿಯಲ್ಲ. ಇದು ಪುರಾತನ ಅಥವಾ ರಾಜಮನೆತನಕ್ಕೆ ಸೇರಿದ ಚಿನ್ನವೂ ಅಲ್ಲ” ಎಂದು ಹೇಳಿದ್ದಾರೆ.
ಎಎಸ್‌ಐ ಸ್ಪಷ್ಟನೆಯ ಬಳಿಕ ಕುಟುಂಬಸ್ಥರು ಭಾವುಕರಾಗಿ ಪ್ರತಿಕ್ರಿಯಿಸಿ, “ಇದು ನಿಧಿಯಲ್ಲ ಎಂದಾದರೆ, ನಮ್ಮ ಪೂರ್ವಜರು ಸಂಗ್ರಹಿಸಿರಬಹುದು. ಹೀಗಾಗಿ ಚಿನ್ನವನ್ನು ನಮಗೆ ಹಿಂದಿರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ. ಕುಟುಂಬದ ಬೇಡಿಕೆಗೆ ಗ್ರಾಮಸ್ಥರೂ ಸಹ ಬೆಂಬಲ ವ್ಯಕ್ತಪಡಿಸಿದ್ದು, ಚಿನ್ನವನ್ನು ಕುಟುಂಬಕ್ಕೆ ವಾಪಸ್ ನೀಡಬೇಕೆಂದು ಆಗ್ರಹಿಸಿದ್ದಾರೆ.






