ಬೀದರ್: ಬೀದರ್ ಜಿಲ್ಲಾ ಪೊಲೀಸ್ರ ಮಹತ್ವದ ಕಾರ್ಯಾಚರಣೆಯಲ್ಲಿ ಸಂತಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹11 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಮಾದಕ ಪದಾರ್ಥ ಹಾಗೂ ಒಂದು ಆಟೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿತರನ್ನು ಬಂಧಿಸಲಾಗಿದೆ.
ಇದನ್ನು ಓದಿ: ಬೀದರ್: ಕಬ್ಬಿನ ದರ ಟನ್ಗೆ ₹3150 ನಿಗದಿ
ಬೀದರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಅವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ನಡೆಸಲಾಗಿದೆ. ಸಂತಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಜಂಬಗಿ-ಬಿ – ಹಂಗರಗಾ ರಸ್ತೆ, ಜಂಬಗಿ-ಬಿ ಶಿವಾರ ಅರಣ್ಯ ಪ್ರದೇಶದಲ್ಲಿ ತೆಲಂಗಾಣ ಕಡೆಯಿಂದ ಜಂಬಗಿ ಗ್ರಾಮದ ಮೂಲಕ ಅನಧಿಕೃತವಾಗಿ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದರು.
ಭಾಲ್ಕಿ ಉಪ-ವಿಭಾಗದ ಉಪಾಧೀಕ್ಷಕರಾದ ಶ್ರೀ ಶಿವಾನಂದ ಪವಾಡಶೆಟ್ಟಿ ಅವರ ನೇತೃತ್ವದಲ್ಲಿ, ಔರಾದ್-ಬಿ ವೃತ್ತದ ಸಿ.ಪಿ.ಐ ಶ್ರೀ ರಘುವೀರಸಿಂಗ್ ಠಾಕೂರ, ಸಂತಪೂರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ದಿನೇಶ್ ಎಂ.ಟಿ. ಹಾಗೂ ಠಾಣೆಯ ಸಿಬ್ಬಂದಿಯಾದ ಶ್ರೀ ಶೇಷರಾವ್ (ಎ.ಎಸ್.ಐ), ಶ್ರೀ ಅರುಣಸಿಂಗ್, ಶ್ರೀ ರಾಮರೆಡ್ಡಿ, ಶ್ರೀ ಸುಭಾಷ, ಶ್ರೀ ಗೌತಮ, ಶ್ರೀ ಕೊಟ್ರೇಶ ಮತ್ತು ಶ್ರೀ ದತ್ತಾತ್ರಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ದಾಳಿಯ ವೇಳೆ 20 ಕೆ.ಜಿ 630 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹10,31,500) ಹಾಗೂ ಒಂದು ಆಟೋ ವಾಹನ (ಅಂದಾಜು ಮೌಲ್ಯ ₹80,000) ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ₹11,11,500 ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನುಬದ್ಧ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಠಾಣಾ ವ್ಯಾಪ್ತಿಯನ್ನು ನಶಾಮುಕ್ತವಾಗಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.
ಬೀದರ್ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಪೊಲೀಸರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ, ಐ.ಪಿ.ಎಸ್. ತಿಳಿಸಿದ್ದಾರೆ.






