ಬೆಂಗಳೂರು (ಜ.13): ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಪತ್ತೆ ಮತ್ತು ತೆರವು ಕಾರ್ಯಾಚರಣೆ ತೀವ್ರಗೊಂಡಿರುವ ನಡುವೆಯೇ, ಸಾರ್ವಜನಿಕ ಸ್ಥಳದಲ್ಲಿ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿ ಆತಂಕ ಸೃಷ್ಟಿಸಿದ ಬಾಂಗ್ಲಾದೇಶ ಮೂಲದ ಮಹಿಳೆಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಶರ್ಬಾನು ಖತನ್ ಎಂದು ಗುರುತಿಸಲಾಗಿದ್ದು, ಆಕೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಲಿಮಂಗಲ ಪ್ರದೇಶದಲ್ಲಿ ವಾಸವಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ISRO PSLV-C62 ಮಿಷನ್ ವಿಫಲ: ನಷ್ಟದ ಹೊರೆ ಯಾರು ಹೊರುತ್ತಾರೆ?
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರವಲಯದ ವಿವಿಧ ಪ್ರದೇಶಗಳಲ್ಲಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ತೆರವುಗೊಳಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯ ಭಾಗವಾಗಿ ಹುಲಿಮಂಗಲ ವ್ಯಾಪ್ತಿಯಲ್ಲಿ ತಪಾಸಣೆ ನಡೆಯುತ್ತಿದ್ದ ವೇಳೆ, ಶರ್ಬಾನು ಖತನ್ ಏಕಾಏಕಿ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದಾಳೆ. ಇದರಿಂದ ಸ್ಥಳೀಯರಲ್ಲಿ ಗೊಂದಲ ಉಂಟಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಕಂಡುಬಂದಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಹೆಬ್ಬಗೋಡಿ ಠಾಣೆ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.
ಇದನ್ನು ಓದಿ: ಟಾಪರ್ ಆಗಿ ಉತ್ತಮ ಸಾಧನೆ ಮಾಡಿದ್ದು ತಪ್ಪಾಯ್ತು! ಅಸುಯೆಯಿಂದ ಅವನ ಮೇಲೆ ಬೆಂಕಿ ಹಚ್ಚಿದ ಸಹಪಾಠಿಗಳು!!
ಆಕೆಯ ವಾಸಸ್ಥಳ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಆಕೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದು ದೃಢಪಟ್ಟಿದೆ. ಶರ್ಬಾನು ಖತನ್ ಅಕ್ರಮವಾಗಿ ಗಡಿ ದಾಟಿ ಬಂದಿದ್ದಾಳೇ ಅಥವಾ ನಕಲಿ ದಾಖಲೆಗಳ ನೆರವಿನಿಂದ ನಗರದಲ್ಲಿ ವಾಸಿಸುತ್ತಿದ್ದಾಳೇ ಎಂಬುದರ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ಹಿಂದೆ ಸಂಘಟಿತ ಜಾಲವಿರಬಹುದೆಂಬ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಬ್ಬಗೋಡಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಇಂತಹ ಇನ್ನಷ್ಟು ಅಕ್ರಮ ವಲಸಿಗರಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.






