ಬೆಂಗಳೂರು ವಲಯದ NCB ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ₹50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಧಿಕಾರಿಗಳ ಪ್ರಕಾರ, ಈ ಬಾರಿ ವಶಪಡಿಸಿದ ಮಾದಕ ವಸ್ತುಗಳಲ್ಲಿ 45 ಕೆಜಿಗೂ ಅಧಿಕ ಹೈಡ್ರೋಗಾಂಜಾ ಮತ್ತು 6 ಕೆಜಿ ಸೈಲೋಸಿಬಿನ್ ಅಣಬೆಗಳು (ಮೈಂಡ್ ಆಲ್ಟರಿಂಗ್ ಡ್ರಗ್ಗಳು) ಸೇರಿವೆ.
ಇವುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಈ ಮಾದಕ ವಸ್ತುಗಳು ಥೈಲ್ಯಾಂಡ್ ಹಾಗೂ ಶ್ರೀಲಂಕಾದಿಂದ ಸಾಗಿಸಲಾಗುತ್ತಿತ್ತು. ಕೊಲಂಬೋದಿಂದ ಬಂದಿದ್ದ ಇಬ್ಬರು ಆರೋಪಿಗಳಿಂದ 31 ಕೆಜಿ ಹೈಡ್ರೋಗಾಂಜಾ ಮತ್ತು 4 ಕೆಜಿ ಅಣಬೆಗಳು ವಶಪಡಿಸಲಾಗಿದ್ದು, ನಂತರದ ವಿಚಾರಣೆಯಲ್ಲಿ ಮತ್ತೊಬ್ಬ ಶ್ರೀಲಂಕಾ ಮೂಲದ ಹ್ಯಾಂಡ್ಲರ್ ಕೂಡಾ ಪತ್ತೆಯಾಗಿ ಬಂಧನಕ್ಕೆ ಒಳಪಟ್ಟಿದ್ದಾರೆ.
ಅವನಿಂದ ಇನ್ನಷ್ಟು 14 ಕೆಜಿ ಹೈಡ್ರೋಗಾಂಜಾ ಮತ್ತು 2 ಕೆಜಿ ಸೈಲೋಸಿಬಿನ್ ಅಣಬೆಗಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವೆಲ್ಲವನ್ನೂ 250 ಫುಡ್ ಟಿನ್ಗಳ ಒಳಗೆ ಸೀಲ್ ಮಾಡಿ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭಿಸಿದೆ. NCB ಅಧಿಕಾರಿಗಳ ಅಭಿಪ್ರಾಯದಲ್ಲಿ, ಈ ಮಾದಕ ವಸ್ತುಗಳನ್ನು ಭಾರತದ ವಿವಿಧ ರಾಜ್ಯಗಳಿಗೆ, ವಿಶೇಷವಾಗಿ ಕೇರಳ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ಗಳಲ್ಲಿ ಪೂರೈಸುವ ಯೋಜನೆ ಇತ್ತು ಎನ್ನಲಾಗಿದೆ.
2025 ರಲ್ಲಿ ಬೆಂಗಳೂರಿನ ಎನ್ಸಿಬಿ ವಿಭಾಗವು ಈಗಾಗಲೇ ₹100 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿದ್ದು, 18 ಪ್ರಕರಣಗಳಲ್ಲಿ 45ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಘಟನೆಗಳಲ್ಲಿ ಇದು ಪ್ರಮುಖ ಕಾರ್ಯಾಚರಣೆಗಳಲ್ಲಿ ಒಂದಾಗಿದ್ದು, ಭಾರತದ ವಿಮಾನ ನಿಲ್ದಾಣಗಳ ಮೂಲಕ ನಡೆಯುತ್ತಿರುವ ಅಂತರರಾಷ್ಟ್ರೀಯ ಮಾದಕ ವಸ್ತು ದಂಧೆಗೆ ತಡೆಯು ಹಾಕಿದಂತೆ ಪರಿಣಮಿಸಿದೆ.






