ಪತ್ನಿಯ ಶೀಲದ ಬಗ್ಗೆ ಅನುಮಾನ ಪಟ್ಟು, ಆಕೆಯ ಮೇಲೆ ನಿರಂತರವಾಗಿ ಹಿಂಸೆ ನಡೆಸಿ ಕೊನೆಗೆ ಪತಿಯೇ ಕೊಲೆ ಮಾಡಿದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಪೋಲಿ ಗ್ರಾಮದಲ್ಲಿ ನಡೆದಿದೆ. ಕಿರಣಾ ಎಂಬ ಮಹಿಳೆ ಈ ಕ್ರೂರ ಕೃತ್ಯಕ್ಕೆ ಬಲಿಯಾಗಿದ್ದು, ಪತಿ ಅವಿನಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿಯನ್ನು ಕೊಂದ ಬಳಿಕ ಏನೂ ಗೊತ್ತಿಲ್ಲದಂತೆ ನಟಿಸಿದ ಅವಿನಾಶ್, ಹೃದಯಾಘಾತದಿಂದ ಕಿರಣಾ ಮೃತಪಟ್ಟಿದ್ದಾಳೆ ಎಂದು ಎಲ್ಲರನ್ನೂ ನಂಬಿಸಲು ಯತ್ನಿಸಿದ್ದ. ಆದರೆ ಶವಕ್ಕೆ ಸ್ನಾನ ಮಾಡಿಸುವ ವೇಳೆ ನಿಜಾಂಶ ಬಯಲಿಗೆ ಬಂದಿದೆ.
ಇದನ್ನು ಓದಿ: ಅಕ್ರಮ ಸಂಬಂಧ ಬಯಲಾದ ಭಯ: ಐದು ವರ್ಷದ ಮಗನನ್ನೇ ಕೊಂದ ತಾಯಿ..!!
ಇದನ್ನು ಓದಿ: ಹಠಕ್ಕೆ ಬಿದ್ದು ಮದುವೆಯಾಗಿದ್ದ ಯುವತಿ: ಆರೇ ತಿಂಗಳಲ್ಲಿ ಪತಿಯನ್ನು ಕಳೆದುಕೊಂಡ ದುರಂತ
ಅವಿನಾಶ್ ಮತ್ತು ಕಿರಣಾ ದಂಪತಿ ಗ್ರಾಮದಲ್ಲಿ ಅಂಗಡಿ ನಡೆಸುತ್ತಿದ್ದು, ಅದೇ ಅವರ ಜೀವನೋಪಾಯವಾಗಿತ್ತು. ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿದ್ದ ಇವರ ಬದುಕು ಆರಂಭದಲ್ಲಿ ಸುಖಸಮೃದ್ಧವಾಗಿದ್ದು, ಇಬ್ಬರು ಪುಟ್ಟ ಮಕ್ಕಳು ಇದಕ್ಕೆ ಸಾಕ್ಷಿಯಾಗಿದ್ದರು. ಆದರೆ ಕಳೆದ ಕೆಲ ತಿಂಗಳುಗಳಿಂದ ಅವಿನಾಶ್ ಮನಸ್ಸಿನಲ್ಲಿ ಪತ್ನಿಯ ಬಗ್ಗೆ ಅಸಂಬದ್ಧ ಅನುಮಾನಗಳು ಹುಟ್ಟಿಕೊಂಡಿದ್ದು, ಅದೇ ಕಾರಣಕ್ಕೆ ಮನೆಯೊಳಗೆ ದಿನನಿತ್ಯ ಜಗಳಗಳು ನಡೆಯುತ್ತಿವೆ.
ಅಂಗಡಿಗೆ ಜನರ ಓಡಾಟ ಸಾಮಾನ್ಯವಾದರೂ, ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಿಕೊಂಡು ಅವಿನಾಶ್ ಪತ್ನಿಯ ಮೇಲೆ ಕೋಪ ತೋರಿಸುತ್ತಿದ್ದ.
ಎರಡು ದಿನಗಳ ಹಿಂದೆ ಇದೇ ವಿಚಾರಕ್ಕೆ ಕಿರಣಾಳ ಮೇಲೆ ಹಲ್ಲೆ ನಡೆದಿತ್ತು. ವಿಷಯ ತಿಳಿದ ಕುಟುಂಬದ ಹಿರಿಯರು ಸ್ಥಳಕ್ಕೆ ಬಂದು ದಂಪತಿಗೆ ಬುದ್ಧಿ ಹೇಳಿ ಸಮಾಧಾನಪಡಿಸಿ ಹೋಗಿದ್ದರು. ಆದರೆ ಅವರು ಹೊರಟ ಬಳಿಕ, ಮೊನ್ನೆ ಮಧ್ಯರಾತ್ರಿ ಅವಿನಾಶ್ ಮತ್ತೆ ಕಿರಣಾಳ ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ್ದು, ಅದರ ಪರಿಣಾಮವಾಗಿ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ.
ಕಿರಣಾ ಸಾವನ್ನಪ್ಪುತ್ತಿದ್ದಂತೆ ಅವಿನಾಶ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಮತ್ತೆ ಶವವನ್ನು ಊರಿಗೆ ತಂದು ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಿಕೊಂಡಿದ್ದಾನೆ. ಈ ವೇಳೆ ಶವಕ್ಕೆ ಸ್ನಾನ ಮಾಡಿಸಲು ಮಹಿಳೆಯರು ಬಟ್ಟೆ ತೆಗೆಯುತ್ತಿದ್ದಾಗ, ದೇಹದ ಮೇಲೆ ಕಾಣಿಸಿಕೊಂಡ ಗಾಯಗಳು ಮತ್ತು ಕಪ್ಪು ಗುರುತುಗಳು ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿವೆ. ಆಗಲೇ ಪತಿಯ ಹಿಂಸೆ ಬಗ್ಗೆ ಅನುಮಾನ ಮೂಡಿ, ನಂದಗಡ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಅವಿನಾಶ್‌ನನ್ನು ವಶಕ್ಕೆ ಪಡೆದಿದ್ದಾರೆ.
ಕಿರಣಾಳ ಮೇಲೆ ಪತಿ ತೋರಿಸಿದ ವರ್ತನೆ ಮಾನವೀಯತೆಯನ್ನೇ ಮೀರಿದದ್ದು ಎನ್ನಲಾಗಿದೆ. ಆಕೆಗೆ ವಿದ್ಯುತ್ ಶಾಕ್ ನೀಡಿರುವುದು, ಲಟ್ಟಣಿಗೆಯಿಂದ ಹೊಡೆದಿರುವುದು, ಮಕ್ಕಳ ಎದುರಲ್ಲೇ ಅವಮಾನಿಸಿ ಹಿಂಸೆ ನೀಡಿರುವುದೂ ಆರೋಪಗಳಲ್ಲಿವೆ. ಕಿರಣಾ ಮೃತದೇಹವನ್ನು ಬೆಳಗಾವಿ ಬೀಮ್ಸ್ ಶವಾಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಾಥಮಿಕ ವರದಿಯಲ್ಲಿಯೇ ಇದು ಕೊಲೆ ಎಂಬುದು ದೃಢಪಟ್ಟಿದೆ. ವಿಚಾರಣೆಯ ವೇಳೆ ಅವಿನಾಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ತಾಯಿ ಸಾವನ್ನಪ್ಪಿ, ತಂದೆ ಜೈಲಿಗೆ ಹೋಗಿರುವುದರಿಂದ ದಂಪತಿಯ ಇಬ್ಬರು ಮಕ್ಕಳು ಈಗ ಅನಾಥ ಸ್ಥಿತಿಗೆ ತಲುಪಿದ್ದಾರೆ.
#ಬೆಳಗಾವಿ #Husband kills wife






