ದೇವನಹಳ್ಳಿ, ನವೆಂಬರ್ 20: ಬಾರ್ ಸ್ಥಾಪನೆಗೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಜೆಸಿಬಿ ತಂದು ಆಂಜನೇಯ ಸ್ವಾಮಿಯ ದೇವಾಲಯವನ್ನು ಧ್ವಂಸ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಬಳಿ ಬಾರ್ ಪ್ರಾರಂಭಿಸಲು ಕೆಲವು ವ್ಯಕ್ತಿಗಳು ಕಳೆದ ಹಲವು ದಿನಗಳಿಂದ ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಾರ್ ಮಾಡಲು ಉದ್ದೇಶಿಸಿರುವ ಸ್ಥಳದ ಹತ್ತಿರದಲ್ಲೇ ಪ್ರಾಚೀನ ಆಂಜನೇಯ ದೇವಾಲಯ ಇರುವುದರಿಂದ, ದೇವಾಲಯದ ಸಮಿತಿ ಈ ಕುರಿತು ಅನುಮತಿ ನೀಡಬಾರದು ಎಂದು ಇಲಾಖೆಗೆ ಅಧಿಕೃತವಾಗಿ ಮನವಿ ಸಲ್ಲಿಸಿತ್ತು.
ಈ ಹಿನ್ನೆಲೆಯಲ್ಲೇ ದೇವಾಲಯವನ್ನು ಗುರಿಯಾಗಿಸಿಕೊಂಡ ಕಿಡಿಗೇಡಿಗಳು, ಗುರುವಾರ ರಾತ್ರಿ ಜೆಸಿಬಿ ಮೂಲಕ ದೇಗುಲವನ್ನು ನೆಲಸಮಗೊಳಿಸಿದರೆಂದು ಸ್ಥಳೀಯ ಮೂಲಗಳು ತಿಳಿಸಿವೆ. ಶುಕ್ರವಾರ ಬೆಳಿಗ್ಗೆ ವಾಕಿಂಗ್‌ಗೆ ಬಂದ ಗ್ರಾಮಸ್ಥರು ದೇವಾಲಯ ಧ್ವಂಸವಾಗಿರುವುದನ್ನು ಕಂಡು ಬೆಚ್ಚಿಬಿದ್ದರು.
ಘಟನೆಯ ಬಗ್ಗೆ ಸ್ಥಳೀಯರು ನಂದಗುಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯದ ಭಕ್ತರು ಕೂಡ ಘಟನಾ ಸ್ಥಳಕ್ಕೆ ಸೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಜೆಸಿಬಿ ಯಾರು ತಂದರು? ಯಾರು ನಿರ್ದೇಶಿಸಿದ್ದಾರೆ? ಎಂಬ ವಿಷಯದಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಗ್ರಾಮದಲ್ಲಿ ಈ ಘಟನೆಯ ಪರಿಣಾಮವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸರು ನಿಯೋಜಿಸಲಾಗಿದೆ.






