ಢಾಕಾ (ಡಿ.27): ರಾಜಕೀಯ ಅಶಾಂತಿ, ಹಿಂಸಾಚಾರ ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ಬಾಂಗ್ಲಾದೇಶ ಇದೀಗ ಮತ್ತೊಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ದೇಶದಲ್ಲಿ ಮುಂದಿನ ವರ್ಷ ಆರಂಭದಲ್ಲೇ ಕಾಂಡೋಮ್‌ಗಳ ತೀವ್ರ ಕೊರತೆ ಎದುರಾಗುವ ಸಾಧ್ಯತೆ ಇದ್ದು, ಪ್ರಸ್ತುತ ಕೇವಲ 38 ದಿನಗಳ ಸ್ಟಾಕ್ ಮಾತ್ರ ಉಳಿದಿದೆ ಎಂದು ವರದಿಗಳು ತಿಳಿಸಿವೆ.
ಸ್ಥಳೀಯ ಮಾಧ್ಯಮ ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಹಣಕಾಸು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಗರ್ಭನಿರೋಧಕಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಉಳಿದಿರುವ 38 ದಿನಗಳ ಸಂಗ್ರಹ ಮುಗಿದ ಬಳಿಕ ಕನಿಷ್ಠ ಒಂದು ತಿಂಗಳ ಕಾಲ ಕಾಂಡೋಮ್‌ಗಳು ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜನನ ಪ್ರಮಾಣ ಹೆಚ್ಚುತ್ತಿರುವ ಹೊತ್ತಿನಲ್ಲಿ ಬಿಕ್ಕಟ್ಟು
ಬಾಂಗ್ಲಾದೇಶದಲ್ಲಿ 50 ವರ್ಷಗಳ ನಂತರ ಮೊದಲ ಬಾರಿ ಒಟ್ಟು ಫಲವತ್ತತೆ ದರ (TFR) ಏರಿಕೆಯಾಗಿದೆ. ಮಲ್ಟಿಪಲ್ ಇಂಡಿಕೇಟರ್ ಕ್ಲಸ್ಟರ್ ಸಮೀಕ್ಷೆ–2025 ಪ್ರಕಾರ, ದೇಶದ TFR 2.4ಕ್ಕೆ ಏರಿಕೆಯಾಗಿದ್ದು, ಕಳೆದ ವರ್ಷ ಇದು 2.3 ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕುಟುಂಬ ಯೋಜನೆಯಿಂದ ದೂರ ಸರಿಯುತ್ತಿರುವ ದಂಪತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗರ್ಭನಿರೋಧಕಗಳ ಕೊರತೆ ಜನನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬಹುದೆಂಬ ಆತಂಕ ವ್ಯಕ್ತವಾಗಿದೆ.
ಆರು ವರ್ಷಗಳಲ್ಲಿ ಗರ್ಭನಿರೋಧಕ ಪೂರೈಕೆಯಲ್ಲಿ ಭಾರೀ ಕುಸಿತ
ಕುಟುಂಬ ಯೋಜನಾ ನಿರ್ದೇಶನಾಲಯ (DGFP) ದೇಶಾದ್ಯಂತ ಉಚಿತವಾಗಿ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳು, IUD, ಇಂಜೆಕ್ಷನ್‌ಗಳು ಮತ್ತು ಇಂಪ್ಲಾಂಟ್‌ಗಳನ್ನು ವಿತರಿಸುತ್ತದೆ. ಆದರೆ ರಾಷ್ಟ್ರೀಯ ಗರ್ಭನಿರೋಧಕ ಸಾರಾಂಶ ವರದಿ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಕಾಂಡೋಮ್‌ಗಳ ಪೂರೈಕೆ ಶೇಕಡಾ 57ರಷ್ಟು ಕುಸಿತವಾಗಿದೆ.
ಇತರ ಗರ್ಭನಿರೋಧಕಗಳ ಸ್ಥಿತಿಯೂ ಗಂಭೀರವಾಗಿದ್ದು:
ಗರ್ಭನಿರೋಧಕ ಮಾತ್ರೆಗಳು – 63% ಕುಸಿತ IUDಗಳು – 64% ಕುಸಿತ ಇಂಜೆಕ್ಷನ್‌ಗಳು – 41% ಕುಸಿತ ಇಂಪ್ಲಾಂಟ್‌ಗಳು – 37% ಕುಸಿತ
ಅಧಿಕಾರಿಗಳ ಸ್ಪಷ್ಟನೆ
ಡಿಜಿಎಫ್‌ಪಿ ಲಾಜಿಸ್ಟಿಕ್ಸ್ ಮತ್ತು ಸರಬರಾಜು ಘಟಕದ ನಿರ್ದೇಶಕ ಅಬ್ದುರ್ ರಝಾಕ್ ಮಾತನಾಡಿ, “ಖರೀದಿಗೆ ಸಂಬಂಧಿಸಿದ ಕಾನೂನು ವಿವಾದಗಳು ಬಗೆಹರಿದರೆ, ಕೆಲವು ಗರ್ಭನಿರೋಧಕಗಳ ಪೂರೈಕೆ ಶೀಘ್ರದಲ್ಲೇ ಆರಂಭವಾಗಬಹುದು. ಇಲ್ಲದಿದ್ದರೆ ಕನಿಷ್ಠ ಒಂದು ತಿಂಗಳಾದರೂ ಜನರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಇದೇ ವೇಳೆ, ಕ್ಷೇತ್ರ ಮಟ್ಟದ ಸಿಬ್ಬಂದಿ ಕೊರತೆ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದು, ಕಾನೂನು ಸಮಸ್ಯೆಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ. ಮನೆ ಮನೆಗೆ ತೆರಳಿ ಗರ್ಭನಿರೋಧಕ ವಿತರಿಸುವ ಸಿಬ್ಬಂದಿಯ ಕೊರತೆಯಿಂದ ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.






