---Advertisement---

ಬಳ್ಳಾರಿ: ಬ್ಯಾನರ ವಿಚಾರಕ್ಕೆ ಜನಾರ್ದನ ರೆಡ್ಡಿ–ಭರತ್ ರೆಡ್ಡಿ ಬೆಂಬಲಿಗರ ನಡುವೆ ಜಗಳ ; ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ಸಾವು

On: January 1, 2026 7:10 PM
Follow Us:
---Advertisement---

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಂಭೀರ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ.

ಇದನ್ನು ಓದಿ: ಸಾಲದ ಒತ್ತಡಕ್ಕೆ ಕಿಡ್ನಿಯನ್ನೇ ಮಾರಿದ ರೈತ: ಅಕ್ರಮ ಬಡ್ಡಿ ದಂಧೆ 

ನಗರದ ಹವಂಬಾವಿ ಪ್ರದೇಶದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಸಮೀಪ ಜನವರಿ 1ರಂದು ಸಂಜೆ ವೇಳೆ ಈ ಘಟನೆ ಸಂಭವಿಸಿದೆ. ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದ ಶುಭಾಶಯ ಬ್ಯಾನರ್‌ಗಳನ್ನು ಅಳವಡಿಸುವ ವೇಳೆ, ಜನಾರ್ದನ ರೆಡ್ಡಿಯವರ ಮನೆ ಸಮೀಪ ಬ್ಯಾನರ್ ಹಾಕಲು ಯತ್ನಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದೆ. ಇದಕ್ಕೆ ಜನಾರ್ದನ ರೆಡ್ಡಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದೆ.

ಘರ್ಷಣೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆಂದು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಿಸ್ ಫೈರಿಂಗ್ ಆಗಿ ರಾಜಶೇಖರ್ ಎಂಬ ಯುವಕನಿಗೆ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ರಾಜಶೇಖರ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಇನ್ನೂ ಹಲವರಿಗೆ ಗಾಯಗಳಾಗಿವೆ.

ಜನಾರ್ದನ ರೆಡ್ಡಿ ಪ್ರತಿಕ್ರಿಯೆ

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಕಳೆದ ಎರಡುವರೆ ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಭರತ್ ರೆಡ್ಡಿ, ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮವನ್ನು ಅಬ್ಬರದಿಂದ ನಡೆಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯ ಮುಂದೆ ಬಂದು ಬ್ಯಾನರ್ ಅಳವಡಿಸುತ್ತಿದ್ದುದಕ್ಕೆ ಭದ್ರತಾ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದಾಗ, ಅವರ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿಸಿದ್ದಾರೆ.

ಭರತ್ ರೆಡ್ಡಿ ಆರೋಪ

ಇನ್ನೊಂದೆಡೆ, ಶಾಸಕ ನಾರಾ ಭರತ್ ರೆಡ್ಡಿ ಪ್ರತಿಕ್ರಿಯಿಸಿ, ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನಾರ್ದನ ರೆಡ್ಡಿ ಸಹಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ವಾಲ್ಮೀಕಿ ಪುತ್ಥಳಿ ಉದ್ಘಾಟನೆಯನ್ನು ಶಾಂತಿಯುತವಾಗಿ ನಡೆಸಲು ಯತ್ನಿಸಿದ್ದರೂ, ಜನಾರ್ದನ ರೆಡ್ಡಿ ಬೆಂಬಲಿಗರು ಗಲಾಟೆ ಸೃಷ್ಟಿಸಿದ್ದಾರೆ ಎಂದು ದೂರಿದ್ದಾರೆ.

ಈ ಘಟನೆಯಲ್ಲಿ ತಮ್ಮ ಬೆಂಬಲಿಗನೊಬ್ಬನಿಗೆ ಗುಂಡು ತಗುಲಿ ಸಾವನ್ನಪ್ಪಿರುವುದನ್ನು ಖಂಡಿಸಿದ ಭರತ್ ರೆಡ್ಡಿ, ಇದು ಕೇವಲ ತಮ್ಮ ಮೇಲಿನ ಅವಮಾನವಲ್ಲ, ವಾಲ್ಮೀಕಿ ಮಹರ್ಷಿಗಳಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಈ ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Join WhatsApp

Join Now

RELATED POSTS

1 thought on “ಬಳ್ಳಾರಿ: ಬ್ಯಾನರ ವಿಚಾರಕ್ಕೆ ಜನಾರ್ದನ ರೆಡ್ಡಿ–ಭರತ್ ರೆಡ್ಡಿ ಬೆಂಬಲಿಗರ ನಡುವೆ ಜಗಳ ; ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ಸಾವು”

Comments are closed.