ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದು, ಈ ದಾಳಿಯ ಆರೋಪಿ ಪೊಲೀಸರ ಗುಂಡಿಗೆ ಬಲಿಯಾದ ಸಾಜಿದ್ ಅಕ್ರಂ (50) ಭಾರತೀಯ ಪ್ರಜೆ ಹಾಗೂ ಹೈದರಾಬಾದ್‌ನ ನಿವಾಸಿ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 14ರಂದು ಯಹೂದಿ ಹಬ್ಬ ‘ಹನುಕ್ಕಾ’ ಆಚರಣೆಗೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರ ಮೇಲೆ ಸಾಜಿದ್ ಅಕ್ರಂ ತನ್ನ ಪುತ್ರ ನವೀದ್ (24) ಜೊತೆಗೆ ಸೇರಿ ಅಟ್ಟಹಾಸವಾಗಿ ಗುಂಡಿನ ದಾಳಿ ನಡೆಸಿದ್ದಾನೆ.
ಬಿ.ಕಾಂ ಪದವೀಧರನಾಗಿರುವ ಸಾಜಿದ್ ಅಕ್ರಂ ಸುಮಾರು 27 ವರ್ಷಗಳ ಹಿಂದೆ ಉದ್ಯೋಗದ ಉದ್ದೇಶದಿಂದ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಅಲ್ಲೇ ಶಾಶ್ವತವಾಗಿ ನೆಲೆಸುವ ಮುನ್ನ ಯೂರೋಪ್ ಮೂಲದ ಮಹಿಳೆಯೊಂದಿಗೆ ವಿವಾಹವಾಗಿದ್ದಾನೆ. ಇವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದು, ಇಬ್ಬರೂ ಆಸ್ಟ್ರೇಲಿಯಾದಲ್ಲೇ ಜನಿಸಿ ಅಲ್ಲಿನ ಪೌರತ್ವ ಪಡೆದಿದ್ದಾರೆ. ಭಾರತದಲ್ಲಿರುವ ಸಂಬಂಧಿಕರೊಂದಿಗೆ ಸಾಜಿದ್ ಅಕ್ರಂ ಅತಿ ಕಡಿಮೆ ಸಂಪರ್ಕ ಮಾತ್ರ ಹೊಂದಿದ್ದ ಎಂದು ತೆಲಂಗಾಣ ಡಿಜಿಪಿ ಕಚೇರಿ ಮಾಹಿತಿ ನೀಡಿದೆ.
1998ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ ಬಳಿಕ ವಯಸ್ಸಾದ ತಂದೆ-ತಾಯಿಯನ್ನು ಭೇಟಿಯಾಗಲು ಅಥವಾ ಜಮೀನಿನ ವಿಚಾರ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಮಾತ್ರ ಸಾಜಿದ್ ಅಕ್ರಂ ಆರು ಬಾರಿ ಭಾರತಕ್ಕೆ ಬಂದಿದ್ದಾನೆ. ತಂದೆ ನಿಧನರಾದ ಸಂದರ್ಭದಲ್ಲೂ ಆತ ಭಾರತಕ್ಕೆ ಆಗಮಿಸಿರಲಿಲ್ಲ. ಆಸ್ಟ್ರೇಲಿಯಾದಲ್ಲಿದ್ದಾಗ ಆತನ ಚಟುವಟಿಕೆಗಳು ಅಥವಾ ಭಯೋತ್ಪಾದಕ ಸಂಘಟನೆಗಳ ಜೊತೆಗಿನ ಸಂಬಂಧದ ಬಗ್ಗೆ ಕುಟುಂಬದವರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸದ್ಯ ಆಸ್ಟ್ರೇಲಿಯಾ ಪೊಲೀಸರ ವಶದಲ್ಲಿರುವ ಸಾಜಿದ್ ಅಕ್ರಂನ ಪುತ್ರ ನವೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನೊಬ್ಬರೂ ಭಾರತಕ್ಕೆ ಬಂದಿರುವ ದಾಖಲೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೋಂಡಿ ಬೀಚ್‌ನಲ್ಲಿ ನಡೆದ ಈ ಗುಂಡಿನ ದಾಳಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯಿಂದ ಪ್ರೇರಿತವಾದ ಭಯೋತ್ಪಾದಕ ಕೃತ್ಯ ಎಂದು ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್ ಕಮಿಷನರ್ ಕ್ರಿಸ್ಸಿ ಬ್ಯಾರೆಟ್ ಹೇಳಿದ್ದಾರೆ.
ಬೋಂಡಿ ಬೀಚ್ ಗುಂಡಿನ ದಾಳಿ: ಆರೋಪಿ ಭಾರತೀಯ ಮೂಲದ ಸಾಜಿದ್ ಅಕ್ರಂ ಎಂದು ತೆಲಂಗಾಣ ಪೊಲೀಸ್ ದೃಢೀಕರಣ!!!
By krutika naik
On: December 16, 2025 4:42 PM
---Advertisement---






