ಅಮ್ಮ ಎಂದರೆ ಕೇವಲ ಜನ್ಮ ನೀಡಿದವಳು ಮಾತ್ರವಲ್ಲ. ಮಕ್ಕಳು ತನ್ನವರಾಗಿರಲಿ ಅಥವಾ ಪರರವರಾಗಿರಲಿ, ಅಪಾಯ ಬಂದಾಗ ಅಮ್ಮನ ಹೃದಯ ಒಂದೇ ರೀತಿಯಾಗಿ ತಡಿಯುತ್ತದೆ. ಮಕ್ಕಳ ಸುರಕ್ಷತೆಗೆ ತನ್ನ ಪ್ರಾಣವನ್ನೇ ಪಣಕ್ಕಿಡುವ ಶಕ್ತಿ ತಾಯಿಗೆ ಮಾತ್ರ ಸಾದ್ಯ. ಈ ಮಾತಿಗೆ ಜೀವಂತ ಸಾಕ್ಷಿಯಂತೆ ಮಧ್ಯಪ್ರದೇಶದಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ.
ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಜಾವಾದ್ ತಹಸಿಲ್‌ನ ರಣಪುರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಇದ್ದಕ್ಕಿದ್ದಂತೆ ಹೆಜ್ಜೇನುಗಳ ಹಿಂಡು ದಾಳಿ ಮಾಡಿದೆ. ಆ ಸಮಯದಲ್ಲಿ ಅಂಗನವಾಡಿ ಆವರಣದಲ್ಲಿ ಸುಮಾರು 20 ಮಕ್ಕಳು ಆಟವಾಡುತ್ತಿದ್ದರು. ಅಚಾನಕ್ ಜೇನುನೊಣಗಳ ದಾಳಿಯಿಂದ ಮಕ್ಕಳು ಭಯಭೀತರಾಗಿದ್ದರು.
ಇದನ್ನು ಓದಿ: ಸರಪಂಚ ಚುನಾವಣೆಯಲ್ಲಿ ಸ್ಪರ್ಧಿಸುವ ಹಂಬಲಕ್ಕೆ ಆರು ವರ್ಷದ ಮಗಳನ್ನೇ ಕೊಂದ ತಂದೆ…!
ಇದನ್ನು ಓದಿ: ಅನುಮಾನ ಭೂತಕ್ಕೆ ಅಮಾನವೀಯ ಕೃತ್ಯ: ಪತ್ನಿಯ ತಲೆ ಬೋಳಿಸಿದ ಪತಿ
ಅಂಗನವಾಡಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಾಂಚನ್ ಬಾಯಿ ಮೇಘವಾಲ್ ಈ ದೃಶ್ಯ ಕಂಡ ಕೂಡಲೇ ಮಕ್ಕಳ ರಕ್ಷಣೆಗೆ ಧಾವಿಸಿದರು. ತಮ್ಮ ಜೀವದ ಅಪಾಯವನ್ನು ಲೆಕ್ಕಿಸದೇ, ಟಾರ್ಪಾಲ್ ಮತ್ತು ಚಾಪೆಗಳಿಂದ ಮಕ್ಕಳನ್ನು ಮುಚ್ಚಿ, ಒಬ್ಬೊಬ್ಬರಾಗಿ ಎಲ್ಲ ಮಕ್ಕಳನ್ನೂ ಸುರಕ್ಷಿತವಾಗಿ ಒಳಗಿರುವ ಕೋಣೆಗೆ ಕರೆದೊಯ್ದರು.
ಈ ವೇಳೆ ನೂರಾರು ಹೆಜ್ಜೇನುಗಳು ಕಾಂಚನ್ ಬಾಯಿ ಮೇಲೆ ದಾಳಿ ಮಾಡಿದ್ದವು. ಮಕ್ಕಳನ್ನು ಉಳಿಸಬೇಕೆಂಬ ಒಂದೇ ಆಲೋಚನೆಯಲ್ಲಿದ್ದ ಅವರಿಗೆ ತಮ್ಮ ಮೇಲೆ ಆಗುತ್ತಿದ್ದ ನೋವು ಗಮನಕ್ಕೇ ಬಂದಿರಲಿಲ್ಲ.
ಚಿಕಿತ್ಸೆಗೂ ಮುನ್ನವೇ ಕೊನೆಯುಸಿರು
ನೂರಾರು ಜೇನುನೊಣಗಳ ಕಚ್ಚಿನಿಂದ ಕಾಂಚನ್ ಬಾಯಿ ಗಂಭೀರವಾಗಿ ಗಾಯಗೊಂಡರು. ಸ್ಥಳೀಯರು ಅವರನ್ನು ರಕ್ಷಿಸಿ ತಕ್ಷಣ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಗಾಯಗಳ ತೀವ್ರತೆಯಿಂದ ಚಿಕಿತ್ಸೆ ಆರಂಭಿಸುವ ಮುನ್ನವೇ ಕಾಂಚನ್ ಬಾಯಿ ಕೊನೆಯುಸಿರೆಳೆದರು.
ಕಾಂಚನ್ ಬಾಯಿ ‘ಜೈ ಮಾತಾ ದಿ’ ಸ್ವಸಹಾಯ ಗುಂಪಿನ ಅಧ್ಯಕ್ಷೆಯಾಗಿ ಗ್ರಾಮದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಗೌರವಾನ್ವಿತ ಮಹಿಳೆಯಾಗಿದ್ದರು. ಅವರ ಅಕಾಲಿಕ ಸಾವು ಕುಟುಂಬವನ್ನಷ್ಟೇ ಅಲ್ಲ, ಇಡೀ ಗ್ರಾಮವನ್ನು ದುಃಖದ ಸಾಗರಕ್ಕೆ ತಳ್ಳಿದೆ.
ಅವರ ಪತಿ ಶಿವಲಾಲ್ ಈಗಾಗಲೇ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದಾರೆ. ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ತಾಯಿಯ ಮಮತೆಯನ್ನು ಕಳೆದುಕೊಂಡಿದ್ದಾರೆ.
ಗ್ರಾಮದಲ್ಲಿ ಶೋಕದ ಛಾಯೆ
ಘಟನೆಯ ನಂತರ ರಣಪುರ ಗ್ರಾಮದಲ್ಲಿ ಶೋಕ ಮತ್ತು ಭೀತಿಯ ವಾತಾವರಣ ಆವರಿಸಿದೆ. ಅಂಗನವಾಡಿ ಸಮೀಪದ ಮರದಲ್ಲಿ ಜೇನುಗೂಡು ಇದ್ದುದಾಗಿ ತಿಳಿದುಬಂದಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಆಡಳಿತ ತಕ್ಷಣ ಜೇನುಗೂಡುಗಳನ್ನು ತೆರವುಗೊಳಿಸಿ ಪ್ರದೇಶವನ್ನು ಸುರಕ್ಷಿತಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಂಗಳವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕಾಂಚನ್ ಬಾಯಿ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮೃತದೇಹ ಗ್ರಾಮಕ್ಕೆ ತಲುಪುತ್ತಿದ್ದಂತೆಯೇ ಇಡೀ ಗ್ರಾಮ ಮೌನದಲ್ಲಿ ಮುಳುಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ: ಸಹಾಯಕ್ಕೆ ಯಾರೂ ಸಂಬಂಧಿಕರು ಇಲ್ಲ, ತಾಯಿಯ ಅಂತ್ಯಕ್ರಿಯೆಯನ್ನು ಏಕಾಂಗಿಯಾಗಿ ಮಾಡಿದ ಇಬ್ಬರು ಹೆಣ್ಣುಮಕ್ಕಳು…!
ಹೆಜ್ಜೇನುಗಳು ಎಷ್ಟು ಅಪಾಯಕಾರಿ?
ಸಾಮಾನ್ಯವಾಗಿ ಜೇನುನೊಣಗಳು ಶಾಂತ ಸ್ವಭಾವದವು. ಆದರೆ ಅವುಗಳಿಗೆ ತೊಂದರೆ ಉಂಟಾದರೆ ಅತ್ಯಂತ ಆಕ್ರಮಣಕಾರಿಯಾಗುತ್ತವೆ. ಜೇನುನೊಣದ ವಿಷಕ್ಕೆ ಅಲರ್ಜಿ ಇರುವವರಿಗೆ ಒಂದೇ ಕಚ್ಚು ಸಹ ಅಪಾಯಕಾರಿಯಾಗಬಹುದು. ಅದರಲ್ಲೂ ನೂರಾರು ಜೇನುನೊಣಗಳು ಒಟ್ಟಿಗೆ ದಾಳಿ ಮಾಡಿದರೆ ಜೀವ ಉಳಿಯುವ ಸಾಧ್ಯತೆ ಅತ್ಯಂತ ಕಡಿಮೆ.
ಇನ್ನು ಓದಿ: ಅಕ್ಕನನ್ನು ಪ್ರೀತಿಸಿದಕ್ಕೆ ಅಪ್ರಾಪ್ತ ತಮ್ಮನಿಂದ ದೇವಸ್ತಾನದಲ್ಲಿ ಯುವಕನ ಹತ್ಯೆ!!!





